ದಾವಣಗೆರೆ: ಮಹಾನಗರ ಪಾಲಿಕೆ ನಿಯಮ ಉಲ್ಲಂಘಿಸಿ ಕಟ್ಟಿರುವ ಎಸ್ ಎಸ್ ಮಾಲ್ ತೆರವು ಮಾಡುವಂತೆ ಆಗ್ರಹಿಸಿ ಬಿಜೆಪಿ ಮುಂದಿನ ದಿನಗಳಲ್ಲಿ ಉಗ್ರವಾಗಿ ಹೋರಾಟ ಮಾಡಲಿದೆ ಎಂದು ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ ಎಸ್ ಮಾಲ್ ಕಟ್ಟುವಾಗ ಪಾಲಿಕೆ ನಿಯಮ ಉಲ್ಲಂಘಿಸಿದ್ದಾರೆ ಎಂದು ಮಹದೇವಪ್ಪ ಎಂಬುವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ 8 ವಾರದ ಒಳಗೆ ಒತ್ತುವರಿಯಾದ ಭಾಗ ತೆರವುಗೊಳಿಸುವಂತೆ ಆದೇಶ ನೀಡಿತ್ತು. ಆಗ, ಎಸ್ ಎಸ್ ಮಾಲ್ ಮಾಲೀಕರಾದ ಎಸ್ ಎಸ್ ಗಣೇಶ್ ಅವರು ಒಂದು ತಿಂಗಳು ಕಾಲಾವಕಾಶ ಕೇಳಿದ್ದರು. ಒಂದು ತಿಂಗಳು ಕಾಲಾವಕಾಶ ಕೇಳಿದ್ದಾಗಲೇ ತಪ್ಪು ಮಾಡಿದ್ದನ್ನು ಗಣೇಶ್ ಅವರು ಒಪ್ಪಿಕೊಂಡಿದ್ದಾರೆ. ಇದಾದನಂತರ ಮಹದೇವ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆಯಾಯಿತು. ಈ ಕೇಸ್ ನಲ್ಲಿ ಎಸ್ ಎಸ್ ಗಣೇಶ್ ಅವರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಗಣೇಶ್ ಅವರನ್ನು ಎ1 ಆರೋಪಿಯಾಗಿಸಿದ್ದಾರೆ. ಆದರೆ, ಇದುವರೆಗೂ ಪೊಲೀಸರು ಗಣೇಶ್ ಅವರನ್ನು ಕರೆಸಿ ವಿಚಾರಣೆ ಮಾಡಿಲ್ಲ. ಈ ಕೇಸ್ ನಲ್ಲಿ ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯ ಎನ್ನುವಂತಾಗಿದೆ ಎಂದು ಆರೋಪಿಸಿದರು.
ಈ ಹಲ್ಲೆಯಿಂದ ಚೇತರಿಸಿಕೊಳ್ಳದೆ ಮಹದೇವ ಇತ್ತೀಚೆಗೆ ಮರಣ ಹೊಂದಿದ್ದಾರೆ. ಈ ಕೇಸ್ ನಲ್ಲಿ ಪೊಲೀಸ್ ರ ಮೇಲೆ ನಮಗೆ ನಂಬಿಕೆ ಹೋಗಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಆರೋಪಿಗಳನ್ನು ಜೈಲಿಗೆ ಹಾಕಬೇಕು. ಹಾಗೆಯೇ ಎಸ್ ಎಸ್ ಮಾಲ್ ಒತ್ತುವರಿ ತೆರವುಗೊಳಿಸಲು ಬಿಜೆಪಿ ಮುಂದಿನ ದಿನಗಳಲ್ಲಿ ಉಗ್ರವಾಗಿ ಹೋರಾಟ ಮಾಡಲಿದೆ ಎಂದು ತಿಳಿಸಿದರು.



