ಡಿವಿಜಿಸುದ್ದಿ.ಕಾಂ, ದಾವಣಗೆರೆ: ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಕೇಂದ್ರ ಮಾಜಿ ಸಚಿವ ಆರ್.ಎಲ್. ಜಾಲಪ್ಪನವರ ಮನೆ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಕಾಂಗ್ರೆಸ್ ಪಕ್ಷ ಗುರಿಯಾಗಿಸಿ ದಾಳಿ ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಷಡ್ಯಂತ್ರದಿಂದ ನಡೆದಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಆರೋಪಿಸಿದರು.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಐಟಿ ದಾಳಿಗಳು ಮೋದಿ, ಶಾ ಅಣತಿಯಂತೆ ನಡೆಯುತ್ತಿವೆ. ದೇಶದಲ್ಲಿ ಸಾಂವಿಧಾನಿಕ ಸ್ಥಾನಿಕ ಸಂಸ್ಥೆಗಳಾದ ಆದಾಯ ತೆರಿಗೆ ಇಲಾಖೆ (ಐಟಿ) ಜಾರಿ ನಿರ್ದೇಶನಾಲಯ (ಇಡಿ) ಕೇಂದ್ರೀಯ ತನಿಖಾ ದಳ (ಸಿಬಿಐ ಕೇಂದ್ರಗಳು ಸರ್ಕಾರದ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿವೆ.
ರಾಜ್ಯದಲ್ಲಿ ಶೀಘ್ರವೇ ವಿಧಾನಸಭೆಯ15 ಕ್ಷೇತ್ರ ಉಪ ಚುನಾವಣೆಗಳು ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನಾಯಕರು ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸದಂತೆ ಬಿಜೆಪಿ ನಾಯಕರ ಕುತಂತ್ರ ಎಣೆದ್ದಿದ್ದಾರೆ.
ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಅಕ್ರಮ ನಡೆದಿದ್ದರೆ ಎಲ್ಲ ಆಡಳಿತ ಮಂಡಳಿಗಳ ಮೇಲೆಯೂ ಐ.ಟಿ. ದಾಳಿ ಮಾಡಬೇಕಿತ್ತು. ಅದು ಬಿಟ್ಟು ಕಾಂಗ್ರೆಸ್ ನಾಯಕರಿಬ್ಬರ ಒಡೆತನದ ಕಾಲೇಜುಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ದ್ವೇಷ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್. ತಿಮ್ಮಣ್ಣ, ವೆಂಕಟೇಶ್, ತಿರುಮಲೇಶ್, ಡಿ. ಶಿವಕುಮಾರ್, ಮಹೇಶ್ ಇತರರು ಇದ್ದರು.



