ಮೈಸೂರು: ಸಿಎಂ ಯಡಿಯೂರಪ್ಪ ಅವರಿಗೆ ಬುದ್ದಿವಂತಿಕೆ, ತಾಳ್ಮೆ ಅಗತ್ಯ. ಮುಖ್ಯಮಂತ್ರಿ ಅಂದ ಮೇಲೆ ಒತ್ತಡ ಇರುವುದು ಸಹಜ. ಆದರೆ, ಸ್ವಲ್ಪ ತಾಳ್ಮೆ ಇರಬೇಕು ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಸ್ಥಿತಿ ಮುಳ್ಳಿನ ಮೇಲಿನ ಬಟ್ಟೆಯಂತೆ. ಅವರು ಹುಷಾರಾಗಿ ಇರಬೇಕು. ಯಡಿಯೂರಪ್ಪ ಅವರು ಬದಲಾಗಿದ್ದಾರೆ ಅಂತ ಹೇಳುವುದಿಲ್ಲ. ಬದಲಾಗಿಲ್ಲ ಅಂತಲೂ ಹೇಳುವುದು ಕಷ್ಟ. ಅಧಿಕಾರ ಬಂದಾಗ ಸ್ವಲ್ಪ ಬದಲಾವಣೆ ಆಗುವುದು ಸಹಜ. ಸಿದ್ದರಾಮಯ್ಯ ಅವರಿಗೆ ಅಧಿಕಾರ ಇತ್ತು, ಆದರೆ, ಬುದ್ದಿವಂತಿಕೆ ಇರಲಿಲ್ಲ. ಹೀಗಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದರು.
ನಿಗಮ, ಮಂಡಳಿಗಳಿಗೆ ನೇಮಕ ಮಾಡಿದ್ದಾರೆ ಎಲ್ಲರೊಂದಿಗೆ ಚರ್ಚಿಸಿ ನೇಮಕ ಮಾಡಿದ್ದರೆ ಇನ್ನೂ ಚನ್ನಾಗಿ ಆಗುತ್ತಿತ್ತು. ಅವರಿಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ. ಆದ್ದರಿಂದ ನನಗೆ ಬೇಸರವಾಗಿದೆ. ಮಂತ್ರಿ ಮಂಡಲ ವಿಸ್ತರಣೆ ಸಂಬಂಧ ಬಿ.ಎಸ್.ಯಡಿಯೂರಪ್ಪ ಹಾಗೂ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ತಿಹಾರ್ ಜೈಲು ಕಂಡವರನ್ನು ಪಾರ್ಟಿಯ ಪ್ರೆಸಿಡೆಂಟ್ ಮಾಡಿದರೆ ಜನ ಹೇಗೆ ಓಟ್ ಹಾಕುತ್ತಾರೆ ? ಕಾಂಗ್ರೆಸ್‌ಗೆ ಶತಮಾನದ ಇತಿಹಾಸವಿದೆ ಎಂದು ಅವರು, ನನಗೆ ಮಂತ್ರಿಗಿರಿ ಬೇಡ. ನಾನು ಚುನಾವಣೆ ಸಾಕೆಂದು ನಿರ್ಧರಿಸಿದ್ದೆ. ಸಿದ್ದರಾಮಯ್ಯನವರ ನಿರ್ಧಾರಗಳಿಂದ ಬೇಸತ್ತು ಚುನಾವಣೆಯಲ್ಲಿ ಸ್ಪರ್ಧಿಸಿದೆ. ಅವರಿಗೆ ಪಾಠ ಕಲಿಸಿದ್ದಾಗಿದೆ. ವಾಜಪೇಯಿ ಅವಧಿಯಲ್ಲಿ ಸಚಿವನಾಗಿದ್ದೆ. ರಾಜ್ಯ ಸಚಿವನಾಗಿ, ಪಕ್ಷಪಾತವಿಲ್ಲದೆ, ಭ್ರಷ್ಟನಾಗದೆ ಕೆಲಸ ಮಾಡಿದ ತೃಪ್ತಿ ನನಗಿದೆ. ಅಷ್ಟು ಸಾಕು ಎಂದು ತಿಳಿಸಿದರು.



