ಬೆಂಗಳೂರು: 17 ಶಾಸಕರ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ಬಂದಿಲ್ಲ. ಪಕ್ಷದ ಕಾರ್ಯಕರ್ತರ ಶ್ರಮದಿಂದ ರಾಜ್ಯದಲ್ಲಿ ಸರ್ಕಾರ ಬಂದಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 105 ಶಾಸಕರು ಇಲ್ಲದೇ ಇದ್ದಿದ್ರೆ ಸರ್ಕಾರ ರಚಿಸಲು ಸಾಧ್ಯನಾ ..? ಪಕ್ಷದ ಕಾರ್ಯಕರ್ತರ ಶ್ರಮದಿಂದ 105 ಶಾಸಕರು ಗೆದ್ದಿದ್ದೇವೆ. ಮೊದಲು 105 ಶಾಸಕರು, ಆಮೇಲೆ ಉಳಿದವರು. ಯಾರೋ ಒಬ್ಬರಿಂದ ಸರ್ಕಾರ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್, ಜೆಡಿಎಸ್ ನಿಂದ ಬೇಸತ್ತು 17 ಜನ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನನ್ನಿಂದಲೇ ಸರ್ಕಾರ ಬಂದಿದೆ ಅಂತಾ ಯಾರು ಹೇಳ್ತಾರೋ ಅವರು ಇದನ್ನ ಅರ್ಥ ಮಾಡಿಕೊಳ್ಳಬೇಕು. ಸಂಪುಟ ವಿಸ್ತರಣೆ ಬಗ್ಗೆ ಸಿಎಂ, ವರಿಷ್ಠರ ಜೊತೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಟ್ಟರೆ ತಪ್ಪೇನು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾತನಾಡಿ, ಅದು ಅವರ ವೈಯಕ್ತಿಕ ಅಭಿಪ್ರಾಯ. ಅಂತಿಮವಾಗಿ ಪಕ್ಷದ ತೀರ್ಮಾನ ಮುಖ್ಯ ಎಂದರು.
ಜನರಿಂದ ನೇರವಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ಕೊಡೋದು ಶಿಷ್ಟಾಚಾರ. ಪಕ್ಷ, ಸರ್ಕಾರಕ್ಕಿಂತ ಯಾರೂ ದೊಡ್ಡವರಲ್ಲ. ಇಂದು ಹತ್ತು ಜನ ಶಾಸಕರು ಒಟ್ಟಿಗೆ ಸೇರಿದ್ದೆವು. ಅದು ಕೂಡ ನಮ್ಮ ಮನೆಯಲ್ಲಿ ಉಪಹಾರಕ್ಕೆ ಸೇರಿದ್ದೆವು. ನಾವೇನು ರೆಸಾರ್ಟ್, ಹೋಟೆಲ್ ನಲ್ಲಿ ಸಭೆ ನಡೆಸಿಲ್ಲ. ನಮ್ಮ ಮನೆಯಲ್ಲಿ ಚರ್ಚೆ ನಡೆಸಿದ್ದೇವೆ. ಆದಷ್ಟು ಬೇಗ ಇಲ್ಲಿ ಚರ್ಚೆಯಾದ ವಿಚಾರಗಳನ್ನು ವರಿಷ್ಠರ ಗಮನಕ್ಕ ತರುತ್ತೇವೆ ಎಂದರು.



