ಬೆಂಗಳೂರು: ರಾಜ್ಯದಲ್ಲಿ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಂಬಂಧ ಸರ್ಕಾರ ಇಂದು ಆದೇಶ ಹೊರಡಿಸಿದ್ದು, ನಿಗಮದ ಅನುಷ್ಠಾನದ ಜವಾಬ್ದಾರಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವಹಿಸಿದೆ.
ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಮತ್ತು ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವನ್ನು ಕಂಪನಿ ಕಾಯ್ದೆ 2013ರ ಸೆಕ್ಷನ್-7ರನ್ವಯ ಸ್ಥಾಪಿಸುವಂತೆ ಸರ್ಕಾರ ಆದೇಶಿಸಿದೆ.
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಪ್ರಕ್ರಿಯೆ ಆರಂಭದಿಂದ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಭರ್ತಿ ಮಾಡುವವರೆಗಿನ ಜವಾಬ್ದಾರಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ನೋಡಿಕೊಳ್ಳಲಿದ್ದಾರೆ. ನಿಗಮ ಸ್ಥಾಪನೆಗೆ ತಗಲುವ ಪ್ರಾರಂಭಿಕ ವೆಚ್ಚವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದಲೇ ಭರಿಸಲಿದೆ. ಬಳಿಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದಿಂದ ಭರಿಸಿಕೊಳ್ಳುವಂತೆಯೂ ಆಯುಕ್ತರಿಗೆ ಸೂಚಿಸಿರುವ ಸರ್ಕಾರ, ನಿಗಮಕ್ಕೆ 5 ಕೋಟಿ ರೂ. ನೀಡುವುದಾಗಿ ತಿಳಿಸಿದೆ.



