ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಸಚಿವ ಸಂಪುಟಕ್ಕೆ ಮಂಡ್ಯ ಮೂಲದ ಖ್ಯಾತ ವೈದ್ಯ ಡಾ.ವಿವೇಕ್ ಮೂರ್ತಿ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಣ್ ಮಜುಂದಾರ್ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿವೇಕ್ ಮೂರ್ತಿ ಅವರನ್ನು ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಹುದ್ದೆಗೆ ಮತ್ತು ಅರುಣ್ ಮಜುಂದಾರ್ ಅವರನ್ನು ಇಂಧನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವ ಸಾಧ್ಯತೆ ಇದೆ ಎಂದು ವರದಿ ಮಾಡಿದೆ. ಪ್ರಸ್ತುತ, ಕೋವಿಡ್‌ಗೆ ಸಂಬಂಧಿಸಿದಂತೆ ಜೋ ಬೈಡನ್ ಅವರಿಗೆ ಭಾರತ-ಅಮೆರಿಕನ್ ವಿವೇಕ್ ಮೂರ್ತಿ ಸಲಹೆ ನೀಡುತ್ತಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿರುವ ಅರುಣ್ ಅವರು ಇಂಧನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೈಡನ್ ಅವರಿಗೆ ಹಿರಿಯ ಸಲಹೆಗಾರರಾಗಿದ್ದಾರೆ.



