ರಾಮನಗರ: ಶಿರಾ, ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪ ಚುನಾವಣೆ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಶಿರಾ ಕ್ಷೇತ್ರದ ಸೋಲು ಕಂಡಿರುವುದು ನೋವು ತಂದಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಮತದಾರರ ತೀರ್ಪನ್ನು ಗೌರವಿಸುತ್ತೆವೆ. ಹಿಂದಿನ ಉಪ ಚುನಾವಣೆಗಳನ್ನು ಗಮನಿಸಿದರೆ ಮತದಾರರು ಅಡಳಿತ ಪಕ್ಷಗಳ ಪರವಾಗಿ ನಿಂತಿದ್ದಾರೆ. ಕುಮಾರಣ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ, ರೈತರ ಸಾಲಮನ್ನಾ ಮತ್ತು ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೊಟ್ಟ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಆದರೂ ಜನ ನಮ್ಮನ್ನು ತಿರಸ್ಕಾರ ಮಾಡಿದ್ದಾರೆ. ಇದನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ನಮ್ಮ ತಾತ, ತಂದೆ ಸೇರಿದಂತೆ ನಮ್ಮ ಕುಟುಂಬಕ್ಕೆ ರಾಮನಗರ ಜಿಲ್ಲೆಯ ಜನತೆ ರಾಜಕೀಯ ಜನ್ಮ ನೀಡಿದ್ದಾರೆ. ಹಾಗಾಗಿ ನಮ್ಮ ಕುಟುಂಬದ ಕರ್ಮಭೂಮಿ ರಾಮನಗರದಿಂದ ನನ್ನ ರಾಜ್ಯ ಪ್ರವಾಸವನ್ನು ಪ್ರಾರಂಭಿಸುತ್ತಿದ್ದೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ, ಯುವ ಕಾರ್ಯಕರ್ತರ ಸಂಘಟನೆ ಮಾಡುವುದು ನನ್ನ ಪ್ರವಾಸದ ಮುಖ್ಯ ಉದ್ದೇಶ. ನಾನು ಯುವ ಘಟಕದ ರಾಜ್ಯಾಧ್ಯಕ್ಷನಾಗಿ ಮುಂಬರುವ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ಕೊಡುವುದು. ಇನ್ನೂ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ ಎಂದರು.



