ಬೆಂಗಳೂರು : ನವೆಂಬರ್ 17 ರಿಂದ ರಾಜ್ಯದ ಪದವಿ ಕಾಲೇಜುಗಳನ್ನು ತೆರೆಯಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ, ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೊವಿಡ್ 19 ನೆಗೆಟಿವ್ ವರದಿ ಕಡ್ಡಾಯವಾಗಿದೆ.
ಹಾಸ್ಟೆಲ್‌ಗಳು ಕೂಡ ನ. 17 ರಿಂದ ಓಪನ್ ಆಗಲಿವೆ. ಹೀಗಾಗಿ ಕೊರೊನಾ ನೆಗೆಟಿವ್ ವರದಿಯನ್ನು ಪಡೆದು ಕಾಲೇಜ್ ಅಥವಾ ಹಾಸ್ಟೆಲ್‌ಗಳಿಗೆ ತೆರಳಬೇಕು. ಪ್ರತಿಯೊಬ್ಬರು ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಗಂಟಲು ದ್ರವದ ಮಾದರಿಯನ್ನು ತೆಗೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದಷ್ಟು ಬೇಗೆ ಲ್ಯಾಬ್ ವರದಿಗಾಗಿ www.covidwar.karnataka.gov.in/service ಭೇಟಿ ನೀಡಿ ಪಡೆಯಬಹುದಾಗಿದೆ.
ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಪದವಿ, ಎಂಜನಿಯರಿಂಗ್ ಹಾಗೂ ಡಿಪ್ಲೊಮಾ ಕಾಲೇಜುಗಳ ತರಗತಿಗಳನ್ನು ಇದೇ ನವೆಂಬರ್ 17ರಿಂದ ಪುನರಾರಂಭಿಸಲಾಗುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಸರ್ಕಾರಿ, ತಾಂತ್ರಿಕ, ಡಿಪ್ಲೊಮಾ, ಅನುದಾನಿತ, ಅನುದಾನರಹಿತ ಕಾಲೇಜು, ವಿಶ್ವವಿದ್ಯಾಲಯ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ನ. 17ರಿಂದ ತರಗತಿಗಳು ಆರಂಭಗೊಳ್ಳಲಿದ್ದು, ತರಗತಿಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಅವರ ಪೋಷಕರಿಂದ ನಿಗದಿತ ನಮೂನೆಯಲ್ಲಿ ಸಹಿ ಹಾಕಿದ ಒಪ್ಪಿಗೆ ಪತ್ರ ಸಲ್ಲಿಸಬೇಕು. ತರಗತಿಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕಾಲೇಜಿನಲ್ಲಿ ಲಭ್ಯವಿರುವ ಒಟ್ಟು ಕೊಠಡಿಗಳ ಅನುಸಾರ, ದೈಹಿಕ ಅಂತರ ಕಾಪಾಡಿಕೊಂಡು ತರಗತಿ ವೇಳಾಪಟ್ಟಿ ಸಿದ್ಧಪಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.