ಡಿವಿಜಿ ಸುದ್ದಿ, ದಾವಣಗೆರೆ: ಬಾರಿಯ ಮುಂಗಾರು ಬೆಳೆಗಳಿಗೆ ಭದ್ರಾ ನಾಲೆಯಿಂದ ನವೆಂಬರ್ 20ರ ಮಧ್ಯರಾತ್ರಿ 12 ಗಂಟೆ ವರಗೆ ಮಾತ್ರ ನೀರು ಹರಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಸಭಾಂಗಣದಲ್ಲಿ ಬುಧವಾರ ನೀರು ಸಲಹಾ ಸಮಿತಿ ಸಭೆ ನಂತರ ಈ ತೀರ್ಮಾನ ಕೈಗೊಳ್ಳಲಾಯಿತು.
ಭದ್ರಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯಲ್ಲಿ 2020-21ರ ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದಿಂದ ಜುಲೈ ತಿಂಗಳ 22 ರಿಂದ ನೀರು ಹರಿಸಲಾಗುತ್ತಿದ್ದು, ಪ್ರಾಧಿಕಾರದ ಬೈಲಾ ಪ್ರಕಾರ 120 ದಿನಗಳು ಮಾತ್ರ ನೀರು ಹರಿಸಬೇಕಿದೆ. ಬರುವ ನವೆಂಬರ್ 19ಕ್ಕೆ ಅವಧಿ ಪೂರ್ಣಗೊಳ್ಳಲಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಅಚ್ಚುಕಟ್ಟು ವ್ಯಾಪ್ತಿಯ ರೈತರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಸೂಕ್ತ ಸಲಹೆ ಸೂಚನೆ ಆಲಿಸಲಾಯಿತು. ನ.20 ನಂತರ ಮಧ್ಯರಾತ್ರಿಯಿಂದ ನಾಲೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಿಲಾಗುವುದು ಎಂದು ಪವಿತ್ರ ರಾಮಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಕಾಡ ನಿರ್ದೇಶಕ ಷಡಾಕ್ಷರಿ, ರುದ್ರಮೂರ್ತಿ ಹಾಗೂ ರೈತ ಮುಖಂಡ ತೇಜಸ್ವಿ ಪಟೇಲ್, ನೀರು ಬಳಕೆದಾರರ ಸಹಕಾರ ಮಹಾಮಂಡಳಿಯ ನಿರ್ದೇಶಕ ದ್ಯಾವಪ್ಪರೆಡ್ಡಿ, ಮುಖ್ಯ ಇಂಜಿನಿಯರ್ ಯತೀಶ್ ಚಂದ್ರ, ಕಾಡ ಆಡಳಿತಾಧಿಕಾರಿ ಕೃಷ್ಣಮೂರ್ತಿ , ರೈತ ಮುಖಂಡರು ಉಪಸ್ಥಿತರಿದ್ದರು.