ಡಿವಿಜಿ ಸುದ್ದಿ, ಬೆಂಗಳೂರು: ನ. 3ರಂದು ನಡೆದ ಆರ್.ಆರ್. ನಗರ, ಶಿರಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಅ. 28ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯಲಿದೆ. ಈ ಮೂಲಕ ಗೆಲುವು ಯಾರಿಗೆ ಎಂಬುದು ಮಧ್ಯಾಹ್ನದ ನಿರ್ಧಾರವಾಗಲಿದೆ.
ಆರ್.ಆರ್. ನಗರ ಕ್ಷೇತ್ರದ ಮತ ಎಣಿಕೆ ಹಲಗೇವಡೇರ ಹಳ್ಳಿಯಲ್ಲಿರುವ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯಲಿದೆ. ಶಿರಾ ಕ್ಷೇತ್ರದ ಮತ ಎಣಿಕೆ ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ. ಮತ ಎಣಿಕೆಗೂ ಮೊದಲು ಬೆಳಿಗ್ಗೆ 7.30ಕ್ಕೆ ಚುನಾವಣಾ ವೀಕ್ಷಕರು ಮತ್ತು ಅಭ್ಯರ್ಥಿಗಳು ಅಥವಾ ಅವರ ಏಜೆಂಟರ ಸಮ್ಮುಖದಲ್ಲಿ ಮತ ಯಂತ್ರಗಳನ್ನು ಇರಿಸಿದ ಭದ್ರತಾ ಕೊಠಡಿ ತೆರೆಯಲಾಗುತ್ತದೆ. ಮೊದಲು ಅಂಚೆ ಮತಗಳು, 8.30ರಿಂದ ಮತಯಂತ್ರಗಳ ಮತಗಳ ಎಣಿಕೆ ನಡೆಯಲಿದೆ.
ಶಿರಾದಲ್ಲಿ ಎರಡು ಕೊಠಡಿಗಳಲ್ಲಿ ಒಟ್ಟು 14 ಟೇಬಲ್‌ಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಆರ್.ಆರ್. ನಗರದಲ್ಲಿ ನಾಲ್ಕು ಕೊಠಡಿಗಳಲ್ಲಿ ಏಳು ಟೇಬಲ್‌ಗಳಂತೆ ಸೇರಿ ಒಟ್ಟು 28 ಟೇಬಲ್‌ಗಳು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇನ್ನು ಪರಿಷತ್ ಚುನಾವಣೆ– ಮತ ಎಣಿಕೆ ಫಲಿತಾಂಶ ಕೂಡ ಇಂದೇ ನಡೆಯಲಿದೆ. ಪಶ್ಚಿಮ ಪದವೀಧರ ಕ್ಷೇತ್ರದ ಮತ ಎಣಿಕೆ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಗುಲ್ಬರ್ಗ ವಿಶ್ವವಿದ್ಯಾಲಯದ ಗಣಿತ ವಿಜ್ಞಾನ ವಿಭಾಗದಲ್ಲಿ ನಡೆಯಲಿದೆ. ಆಗ್ನೇಯ ಪದವೀಧರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ವೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದೆ.