ಡಿವಿಜಿ ಸುದ್ದಿ, ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಸ್ಥಾನ ಕೈ ತಪ್ಪಿ ಹೋಗುವ ಭಯ ಶುರುವಾಗಿದೆ. ಈ ಕಾರಣಕ್ಕಾಗಿ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹರಿಹಾಯ್ದರು.
ವಿಕಾಸಸೌಧದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ನಲ್ಲಿ ಪವರ್ ಸೆಂಟರ್ ಗಳು ಹೆಚ್ಚಾಗುತ್ತಿವೆ. ಡಿಕೆಶಿ ಪವರ್ ಸೆಂಟರ್, ಸಿದ್ದರಾಮಯ್ಯ ಪವರ್ ಸೆಂಟರ್ ಹೀಗೆ ಅನೇಕ ಪವರ್ ಸೆಂಟರ್ ಗಳಿವೆ. ಸಿಎಂ ಯಡಿಯೂರಪ್ಪ ಬಿಜೆಪಿ ಕಟ್ಟಿ ಬೆಳಸಿದವರು. ಈ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದರು.
ಸಿದ್ದರಾಮಯ್ಯ ಅವರು ಭ್ರಮಾಲೋಕದಿಂದ ಹೊರಗೆ ಬರಬೇಕಿದೆ. ಅವರು ಮತ್ತೆ ಸಿಎಂ ಆಗುತ್ತೇನೆ ಎಂಬ ಭ್ರಮೆಯಲ್ಲಿ ತೇಲುತ್ತಿದ್ದಾರೆ. ಯಡಿಯೂರಪ್ಪನವರನ್ನು ಟೀಕೆ ಮಾಡಿದರೆ ನಾನು ಸಿಎಂ ಆಗಬಹುದು ಎಂಬ ಭ್ರಮೆಯಿಂದ ಹೊರಗೆ ಬನ್ನಿ ಎಂದು ಹೇಳಿದರು.
ಯಡಿಯೂರಪ್ಪನವರು ಕೇವಲ ವೀರಶೈವ ಸಮುದಾಯಕ್ಕೆ ಸೇರಿದವರಲ್ಲ. ಎಲ್ಲ ಸಮಾಜಕ್ಕೂ ಸೇರಿದ ಪ್ರಶ್ನಾತೀತ ನಾಯಕ. ಕೆಲ ವೀರಶೈವ ಮುಖಂಡರು ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಇವರಿಗೆ ಅಧಿಕಾರ ನೀಡಿದವರು ಯಾರು, ಬಸನಗೌಡ ಪಾಟೀಲ್ ಯತ್ನಾಳ್ ಹುಚ್ಚರಂತೆ ಮಾತನಾಡುತ್ತಿದ್ದಾರೆ. ಸಚಿವ ಸ್ಥಾನ ಸಿಗದೆ ಹತಾಶರಾಗಿ ಈ ರೀತಿ ಹುಚ್ಚು ಹುಚ್ಚಾಗಿ ಹೇಳಿಕೆ ನೀಡುತ್ತಿದ್ದಾರೆ. ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕರೆಲ್ಲ ಒತ್ತಾಯ ಮಾಡುತ್ತೇವೆ ಎಂದರು.



