ಡಿವಿಜಿ ಸುದ್ದಿ, ಚಿತ್ರದುರ್ಗ: ಲಾರಿ ಮತ್ತು ಕಾರುಗಳ ನಡುವ ಸರಣಿ ಅಪಘಾತ ನಡೆದಿದ್ದು ಓರ್ವ ಸಾವನ್ನಪ್ಪಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಹಳೇಹಳ್ಳಿ ಬಳಿ ಎರಡು ಕಾರುಗಳಲ್ಲಿ ಲಕ್ಕವಳ್ಳಿ ಕಡೆ ಒಂದೇ ಕುಟುಂಬದವರು ತೆರಳುತ್ತಿದ್ದರು. ಇದೇ ಸಮಯ ಹೊಳಲ್ಕೆರೆ ಕಡೆಯಿಂದ ಚಿತ್ರದುರ್ಗದ ಕಡೆಗೆ ಲಾರಿ ಬರುತ್ತಿದ್ದು, ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಲಕ್ಕವಳ್ಳಿಯ ಶಂಭಪ್ಪ (48) ಎಂಬುವರು ಮೃತಪಟ್ಟಿದ್ದಾರೆ. ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಎರಡು ಕಾರುಗಳು ನುಜ್ಜುಗಜ್ಜಾಗಿವೆ. ಸ್ಥಳಕ್ಕೆ ಹೊಳಲ್ಕೆರೆ ಸಿಪಿಐ ರವೀಶ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರುಗಳಲ್ಲಿ ತರೀಕೆರೆ ತಾಲೂಕಿನ ಲಕ್ಕವಳ್ಳಿಯಿಂದ ಹೊಳಲ್ಕೆರೆ ತಾಲೂಕಿನ ಕೊಂಡಾಪುರ ಗ್ರಾಮಕ್ಕೆ ಹೆಣ್ಣು ನೋಡಲು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.



