ಡಿವಿಜಿ ಸುದ್ದಿ, ದಾವಣಗೆರೆ: ಕೋವಿಡ್ ವೈರಸ್ ಸೋಂಕು ಅರಿವು ಮೂಡಿಸಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಇಂದು ನಗರದ ವಿವಿಧ ಪ್ರದೇಶಗಳಿಗೆ ತೆರಳಿ, ಮಾಸ್ಕ್, ಸಾಮಾಜಿಕ ಅಂತರ ಜಾಗೃತಿ ಮೂಡಿಸಿದರು. ಈ ವೇಳೆ ಮಾಸ್ಕ್ ಹಾಕದವರಿಗೆ ಸ್ಥಳದಲ್ಲಿಯೇ ದಂಡ ಹಾಕಲಾಯಿತು. ಇನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳಿಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಪ್ರಮುಖ ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮಾಸ್ಕ್ ಅಭಿಯಾನ ನಡೆಸಿದರು. ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಸಾರ್ವಜನಿಕರಿಗೆ ಬುದ್ದಿವಾದ ಹೇಳಿದರು. ಈ ರೀತಿ ನಿರ್ಲಕ್ಷ್ಯ ತೋರಿದರೆ ಕೊರೋನಾ ರೋಗ ನಿರ್ಮೂಲನೆ ಮಾಡುವುದು ಕಷ್ಟಸಾಧ್ಯ. ಎಲ್ಲರೂ ಮಾಸ್ಕ್ ಧರಿಸಿ, ಶುಚಿತ್ವವನ್ನು ಕಾಪಾಡಿಕೊಳ್ಳಬೇಕು, ಸಾಮಾಜಿಕ ಅಂತರದ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿ ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರೇ ಮಾಸ್ಕ್ ಧರಿಸದವರನ್ನು ಖುದ್ದು ಗುರುತಿಸಿ, ಅಂತಹವರಿಗೆ ಸ್ಥಳದಲ್ಲಿಯೇ ದಂಡ ಪಾವತಿಸುವಂತೆ ಸೂಚಿಸಿದರು. ಅಲ್ಲದೆ ಜಿಲ್ಲಾಧಿಕಾರಿಗಳೇ ಮಾಸ್ಕ್ ವಿತರಿಸಿದರು. ಮಾಸ್ಕ್ ಧರಿಸದ ಕೆಲವರಿಗೆ ಕೆಲ ಬೀದಿ ಬದಿ ವ್ಯಾಪಾರಿಗಳು ಕೂಡ ಮಾಸ್ಕ್ ಧರಿಸದೆ ವ್ಯಾಪಾರ ನಡೆಸುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ವ್ಯಾಪಾರಸ್ಥರನ್ನು ತರಾಟೆಗೆ ತೆಗೆದುಕೊಂಡು, ಅವರಿಗೂ ದಂಡ ವಿಧಿಸಿದರು. ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ಕೆಲ ವಾಹನ ಸವಾರರನ್ನು ಕೂಡ ತಡೆದು, ದಂಡ ವಿಧಿಸಲಾಯಿತು.
ಹಲವು ಅಂಗಡಿಗಳ ಒಳಗೆ ಪ್ರವೇಶಿಸಿದ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ, ಅಂಗಡಿಗಳ ಮಾಲೀಕರು, ಕೆಲಸಗಾರರು ಮಾಸ್ಕ್ ಧರಿಸದೆ ವ್ಯಾಪಾರ ಚಟುವಟಿಕೆ ನಡೆಸುತ್ತಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಇಂತಹವರಿಗೆ ಹೆಚ್ಚಿನ ದಂಡ ವಿಧಿಸುವುದು ಅಗತ್ಯವಾಗಿದೆ ಎಂದು ಎಚ್ಚರಿಕೆ ನೀಡಿದರು.
ನಗರದ ಕಾಳಿಕಾದೇವಿ ರಸ್ತೆಯಲ್ಲಿನ ಬಿ.ಎಸ್. ಚನ್ನಬಸಪ್ಪ ಬಟ್ಟೆ ಅಂಗಡಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮಳಿಗೆಯೊಳಗೆ ಸಾಮಾಜಿಕ ಅಂತರವಿಲ್ಲದೆ ಜನಜಂಗುಳಿ ಇರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಿಯಮಿತ ಸಂಖ್ಯೆಯಲ್ಲಿ ಗ್ರಾಹಕರಿಗೆ ಅಂಗಡಿಯೊಳಗೆ ಪ್ರವೇಶ ನೀಡಬೇಕು, ಸರದಿಯಂತೆ ಗ್ರಾಹಕರಿಗೆ ಅವಕಾಶ ನೀಡಬೇಕು ಎಂದು ನಿರ್ದೇಶನ ನೀಡಿದರು.
ಗ್ರಾಹಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತೀವ್ರ ಜನಜಂಗುಳಿ ಇದ್ದು, ನಿಯಮಾನುಸಾರ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳಿಗೆ ನೋಟಿಸ್ ನೀಡಿ, ಸೂಕ್ತ ಕ್ರಮ ಜರುಗಿಸುವಂತೆ ನಗರಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳನ್ನೊಳಗೊಂಡ ತಂಡ ಮಾಸ್ಕ್ ಅಭಿಯಾನ ನಡೆಸಿದ್ದನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರೆ, ಮಾಸ್ಕ್ ಧರಿಸದವರು, ದಂಡ ಪಾವತಿಯನ್ನು ತಪ್ಪಿಸಲು ಪಲಾಯನ ಮಾಡುತ್ತಿದ್ದುದು ಕಂಡುಬಂದಿತು. ಇನ್ನು ಕೆಲವರು ಜಿಲ್ಲಾಧಿಕಾರಿಗಳು ನಡೆಸಿದ ಮಾಸ್ಕ್ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಅರಿವು ಮೂಡಿಸುವುದರಿಂದ ಜನರಲ್ಲಿ ಜಾಗೃತಿ ಮೂಡಿಸುವದರ ಜೊತೆಗೆ ಈ ರೀತಿಯ ದಂಡ ಪ್ರಕ್ರಿಯೆ ಕ್ರಮಗಳಿಂದ ಸಾರ್ವಜನಿಕರಲ್ಲಿ ಇನ್ನಷ್ಟು ಪರಿಣಾಮಕಾರಿ ಜಾಗೃತಿ ಮೂಡಿಸಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಗಡಿಯಾರ ಕಂಬದಿಂದ ಪ್ರಾರಂಭವಾದ ಮಾಸ್ಕ್ ಅಭಿಯಾನವು, ನಂತರ ವಿಜಯಲಕ್ಷ್ಮಿ ರಸ್ತೆ, ಕಾಳಿಕಾದೇವಿ ರಸ್ತೆ, ಚೌಕಿಪೇಟೆ, ಚಾಮರಾಜಪೇಟೆ, ಎನ್.ಆರ್. ರಸ್ತೆ, ಕೆ.ಆರ್. ರಸ್ತೆ ಸೇರಿದಂತೆ ವಿವಿಧೆಡೆ ಸಂಚರಿಸಿ, ಪಾದಚಾರಿಗಳು, ಬಟ್ಟೆ ಅಂಗಡಿಗಳು, ಕಿರಾಣಿ ಅಂಗಡಿಗಳು, ಜ್ಯೂವೆಲರಿ ಶಾಪ್‍ಗಳು, ಅಲ್ಲದೆ ಹೋಲ್‍ಸೇಲ್ ಮತ್ತು ರೀಟೇಲ್ ಶಾಪ್‍ಗಳಿಗೂ ತೆರಳಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಯಿತು. ಪೊಲೀಸ್ ಇಲಾಖೆ ಹಾಗೂ ನಗರಪಾಲಿಕೆ ಕಚೇರಿಯ ವತಿಯಿಂದ ಅಧಿಕಾರಿ, ಸಿಬ್ಬಂದಿಗಳು ದಂಡದ ಮೊತ್ತ ಸಂಗ್ರಹಿಸಿ, ರಸೀದಿ ನೀಡುವಲ್ಲಿ ನಿರತರಾಗಿದ್ದು ಕಂಡುಬಂದಿತು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ವಿವಿಧ ಅಧಿಕಾರಿಗಳು ಮಾಸ್ಕ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.