ಡಿವಿಜಿ ಸುದ್ದಿ, ಬೆಂಗಳೂರು: ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಅತಿಯಾದ ಚಳಿಯಿಂದ ಸಾಂಕ್ರಾಮಿಕ ರೋಗಗಳು ಹಾಗೂ ಕೊರೊನಾ ವೈರಸ್ ಹೆಚ್ಚುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆ ವಹಿಸುವಂತೆ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಆರೋಗ್ಯ ಇಲಾಖೆ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಅತಿಯಾದ ಚಳಿ ಇರುವ ಕಾರಣ ಸೋಂಕು ಹೆಚ್ಚಾಗುವ ಕುರಿತು ಮುನ್ನಚ್ಚೆರಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೇ ಆದಷ್ಟು ಹೆಚ್ಚು ಟೆಸ್ಟ್ ಮಾಡಿಸಬೇಕಾದ ಅವಶ್ಯಕತೆಯಿದೆ. ಕೋವಿಡ್ ಜೊತೆ ಸಾಂಕ್ರಾಮಿಕ ರೋಗಗಳು ಉಲ್ಬಣ ಆಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕೇರಳದಲ್ಲಿ ಓಣಂ ಆಚರಣೆ ನಂತರ ಕೇರಳದಲ್ಲಿ ಕೊರೊನಾ ನಿಯಂತ್ರಣ ತಪ್ಪಿದೆ. ಆದ್ದರಿಂದ ನಾಡಹಬ್ಬ ದಸರಾದ ವಿಚಾರದಲ್ಲಿ ನಾವು ಎಚ್ಚರಿಕೆ ವಹಿಸಬೇಕು. ಆದಷ್ಟು ಸರಳವಾಗಿ ನಾಡಹಬ್ಬ ದಸರಾ ಆಚರಿಸಬೇಕಿದೆ. ರಾಜ್ಯದಲ್ಲಿ ಪ್ರತಿದಿನ 80 ಸಾವಿರ ಆರ್ ಟಿಪಿಎಸ್ ಪರೀಕ್ಷೆ ಮಾಡುವ ಸಾಮರ್ಥ್ಯ ಇದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಟೆಸ್ಟಿಂಗ್ ನಡೆಯುತ್ತಿದೆ.
ಅಕ್ಟೋಬರ್ 17 ರಿಂದ ಇಲ್ಲಿಗೆ ಶೇ.73 ರಷ್ಟು ಟೆಸ್ಟ್ ಹೆಚ್ಚಿಗೆ ಮಾಡಿದ್ದೇವೆ. ರಾಜ್ಯದಲ್ಲಿ 1.37% ಹಾಗೂ ಬೆಂಗಳೂರಿನಲ್ಲಿ 1.14% ರಷ್ಟು ಸಾವಿನ ಪ್ರಮಾಣವಿದೆ. ಈಗ ಸೋಂಕಿತರ ಹಾಗೂ ಸಾವಿನ ಪ್ರಮಾಣ ಕಡಿಮೆ ಆಗುತ್ತಿದೆ. ಇದುವರೆಗೂ ರಾಜ್ಯದಲ್ಲಿ 7.70 ಲಕ್ಷ ಮಂದಿ ಸೋಂಕಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟ್ ಮಾಡಲಾಗುತ್ತಿದ್ದು, ರ‍್ಯಾಪಿಡ್ ಮತ್ತು ಆ್ಯಂಟಿಜೆನ್ ಟೆಸ್ಟ್ ಕೂಡ ಹೆಚ್ಚಾಗಿದೆ. 17ರಲ್ಲಿ ಅಕ್ಟೋಬರ್ 22.90 ಲಕ್ಷ ಟೆಸ್ಟ್ ಆಗಿದ್ದು, ಶೇ.73 ಪ್ರಮಾಣ ಹೆಚ್ಚಾಗಿದೆ. ದೆಹಲಿ ಶೇ.58 ರಷ್ಟು ಟೆಸ್ಟ್ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರಲ್ಲಿ ಕಳೆದ 15 ದಿನದಲ್ಲಿ ಟೆಸ್ಟ್ ಪ್ರಮಾಣ ಜಾಸ್ತಿಯಾಗಿದೆ ಎಂದು ತಿಳಿಸಿದರು.



