ಡಿವಿಜಿ ಸುದ್ದಿ, ಬೆಳಗಾವಿ: ಕೊರೊನಾದಿಂದ ಇತ್ತೀಚೆಗೆ ನಿಧನ ಹೊಂದಿದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ನಿವಾಸಕ್ಕೆ ಇಂದು ಯಡಿಯೂರಪ್ಪ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ನಿವಾಸದಲ್ಲಿ ಭೇಟಿಯಾದ ಸಿಎಂ ಅಂಗಡಿ ತಾಯಿ ಸೋಮವ್ವ, ಪತ್ನಿ ಮಂಗಳಾ, ಪುತ್ರಿಯರಾದ ಶ್ರದ್ಧಾ, ಸ್ಫೂರ್ತಿ ಅವರಿಗೆ ಧೈರ್ಯ ತುಂಬಿದರು. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಾಥ್ ನೀಡಿದರು.
ಅಂಗಡಿ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ. ಜ್ವರ ಬಂದಿದ್ದರೂ ತಕ್ಷಣ ಚಿಕಿತ್ಸೆ ಪಡೆಯಲಿಲ್ಲ. ದೆಹಲಿಗೆ ಹೋದ ಮೇಲೂ ಸಕಾಲದಲ್ಲಿ ಚಿಕಿತ್ಸೆ ತೆಗೆದುಕೊಳ್ಳಲಿಲ್ಲ. ಆರೋಗ್ಯವಾಗಿದ್ದೇನೆ ನನಗೇನೂ ಆಗುವುದಿಲ್ಲ ಎಂಬ ಭ್ರಮೆಯಲ್ಲಿ ಅವರು ಇದ್ದರೆಂದು ಕಾಣಿಸುತ್ತದೆ ಎಂದರು.
ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ, ನವದೆಹಲಿಯಲ್ಲಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಸ್ಮಾರಕ ನಿರ್ಮಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ತಯಾರಿ ನಡೆಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಸುರೇಶ ಅಂಗಡಿ ಅವರು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಕಲ್ಪನೆ ಮಾಡಿಕೊಳ್ಳುವುದಕ್ಕೂ ಆಗುತ್ತಿಲ್ಲ. ನಾಲ್ಕು ಬಾರಿ ಸಂಸದರಾಗಿ, ರೈಲ್ವೆ ಖಾತೆ ರಾಜ್ಯ ಸಚಿವರಾಗಿ ರಾಜ್ಯಕ್ಕೆ ಅಪಾರ ಕೊಡುಗೆಯನ್ನು ಅವರು ನೀಡಿದ್ದಾರೆ. ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ನ್ಯಾಯಾಂಗ ನಿಂದನೆ ಅರ್ಜಿ ಹಾಕಿರುವ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದರು.



