ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸುಮಾರು 4,620 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಸದ್ಯ ಬೆಳವಣಗೆ ಹಂತದಲ್ಲಿದ್ದು, ಬೆಳೆಗೆ ಶಿಲೀಂದ್ರ ಸೊರಗು ರೋಗವು ಉಲ್ಭಣವಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ರೈತರು ರೋಗದ ಹತೋಟಿಗೆ ಅಗತ್ಯ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.
ತೊಗರಿಯನ್ನು ರಾಗಿ, ಮೆಕ್ಕೆಜೋಳ, ಅಡಿಕೆ ಜೊತೆಯಲ್ಲಿ ಅಂತರ ಬೆಳೆಯಾಗಿ ಬೆಳೆಯಲಾಗಿದೆ. ಜಿಲ್ಲೆಯಲ್ಲಿ ಮಳೆಯು ಹೆಚ್ಚಾಗಿದ್ದು, ಒಣ ಹವೆ ಮತ್ತು ಮಳೆಯ ವಾತಾವರಣ ಮಿಶ್ರಣಗೊಂಡಾಗ ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ ತೊಗರಿಯಲ್ಲಿ ಶಿಲೀಂದ್ರ ಸೊರಗು ರೋಗವು ಉಲ್ಭಣವಾಗುವ ಸಾಧ್ಯತೆ ಇರುತ್ತದೆ.
ಈ ರೋಗವು ಮಳೆ ನೀರು ಹೊಲದಲ್ಲಿ ಹರಿದಾಡಿದಾಗ ಮತ್ತು ನೀರಾವರಿ ಮೂಲಕ ನೀರು ಹಾಯಿಸುವಾಗ ನೀರಿನ ಮೂಲಕ ಹರಡುತ್ತದೆ. ಸಕಾಲದಲ್ಲಿ ನಿರ್ವಹಣಾ ಕ್ರಮಗಳನ್ನು ಕೈಗೊಂಡರೆ ರೋಗವನ್ನು ಹತೋಟಿ ಮಾಡಬಹುದಾಗಿದೆ. ಈ ದಿಶೆಯಲ್ಲಿ ರೈತರು ಶಿಲೀಂದ್ರ ಸೊರಗು ರೋಗ ಲಕ್ಷಣಗಳು ಮತ್ತು ನಿರ್ವಹಣೆಗಾಗಿ ಕ್ರಮಗಳನ್ನು ಈ ಕ್ರಮ ಕೈಗೊಳ್ಳಬೇಕಾಗಿದೆ.
ರೋಗದ ಲಕ್ಷಣಗಳು: ರೋಗ ಪೀಡಿತ ಸಸ್ಯಗಳು ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತವೆ ಹಾಗೂ ಎಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಉದುರುತ್ತವೆ. ಸಸ್ಯಗಳ ಕಾಂಡ ಮತ್ತು ಬೇರುಗಳನ್ನು ಸೀಳಿ ನೋಡಿದಾಗ ಒಳ ಅಂಗಾಂಶವು ಕಪ್ಪಾಗಿರುತ್ತವೆ ಮತ್ತು ಬೇರುಗಳು ಕೊಳೆತಿರುತ್ತವೆ. ರೋಗದ ತೀವ್ರತೆ ಹೆಚ್ಚಾದಾಗ ಬುಡದ ಭಾಗದಲ್ಲಿ ಬಿಳಿ ಶಿಲೀಂದ್ರ ಸಹ ಕಾಣಬಹುದು.
ನಿರ್ವಹಣೆ: ರೋಗ ಪೀಡಿತ ಸಸ್ಯಗಳನ್ನು ಬೇರು ಸಹಿತ ಕಿತ್ತು ತೆಗೆದು ಸುಡಬೇಕು. ಸಾವಯವ ಗೊಬ್ಬರವನ್ನು ಮಣ್ಣಿಗೆ ಹಾಕುವಾಗ ಟ್ರೈಕೋಡರ್ಮಾ ಜೈವಿಕ ಶಿಲೀಂದ್ರ ನಾಶಕವನ್ನು ಬೆರೆಸಿ ಹಾಕಬೇಕು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



