ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿರುವ ಗ್ಲಾಸ್ ಹೌಸ್ ಅನ್ನು ಪ್ರೇಕ್ಷಣಿಯ ಸ್ಥಳವಾಗಿಸಲು ಒತ್ತು ನೀಡಲಾಗುವುದು ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಪೌರಾಡಳಿತ ಹಾಗೂ ತೋಟಗಾರಿಕಾ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಉದ್ದೇಶಿಸಿ ಮಾತನಾಡಿದ ಅವರು,ಗ್ಲಾಸ್ ಹೌಸ್ ಪೂನಾ-ಬೆಂಗಳೂರು ರಸ್ತೆಗೆ ಹತ್ತಿರವಿರುವುದರಿಂದ ಹೆಚ್ಚಿನ ಪ್ರಚಾರ ನೀಡಬೇಕು. ಜಿಲ್ಲೆಯ ಮುಖ್ಯ ದ್ವಾರದ ಬಳಿ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಫಲಕಗಳನ್ನು ಹಾಕಬೇಕು. ಈ ಬಗ್ಗೆ ಪ್ರವಾಸೋದ್ಯಮ ಹಾಗೂ ಸಾರಿಗೆ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದರು.
ರೈತರು ಬೆಳೆದಂತಹ ಹಣ್ಣು, ತರಕಾರಿ ಹಾಗೂ ಹೂವು ಮಾರಾಟ ಮಾಡಲು ಮಳಿಗೆಗಳನ್ನು ನಿರ್ಮಿಸಿ ರೈತ ಸಂತೆಗಳನ್ನು ಮಾಡಬೇಕು. ರೈತರು ಬೆಳೆದಂತಹ ಬೆಳೆಗಳು ಹಾಳಗಾದಂತೆ ನೋಡಿಕೊಳ್ಳಲು ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಕೋಲ್ಡ್ ಸ್ಟೋರೆಜ್ ಘಟಕ ಅವಶ್ಯಕತೆಯಿರುವುದರಿಂದ ಕೋಲ್ಡ್ ಸ್ಟೋರೆಜ್ ಘಟಕಗಳನ್ನು ಸ್ಥಾಪಿಸಲು ಸೂಕ್ತವಾದ ಪ್ರದೇಶವನ್ನು ಗುರುತಿಸಲು ಹಾಗೂ ಎಲ್ಲಾ ರೈತರಿಗೂ ಬೆಳೆ ವಿಮೆ ಮಾಡಿಸಿಕೊಡಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 650 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದ್ದು, ಜಗಳೂರು ಭಾಗದಲ್ಲಿ ಹೆಚ್ಚಿನದಾಗಿ ಬೆಳೆಯಲಾಗಿದೆ. ರಾಜ್ಯದಲ್ಲಿ ಮಳೆ ಹೆಚ್ಚಾಗಿ ಈರುಳ್ಳಿ ಕೊಳೆತು ಹೊಗುತ್ತಿರುವುದರಿಂದ ಜಿಲ್ಲೆಯಲ್ಲಿ ಈರುಳ್ಳಿ ಹೆಚ್ಚಾಗಿ ಬೆಳೆದಿದ್ದು, ಈರುಳ್ಳಿ ಬೆಳೆದಂತಹ ರೈತರಿಗೆ ನಷ್ಟವಾಗದಂತೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಸೂಚಿಸಿದರು.
ಅಗ್ರಿ ಟೂರಿಸಂಗೆ ಕ್ರಮ
ಸರ್ಕಾರದಿಂದ ಅಗ್ರಿ ಟೂರಿಸಂ ಎಂಬ ಹೂಸ ಯೋಜನೆಯನ್ನು ತರಲು ಯೋಜನೆ ರೂಪಿಸಿದ್ದು, ಜಿಲ್ಲಾವಾರು ಯಾವ ಬೆಳೆಯನ್ನು ಬೆಳೆಯಲಾಗುತ್ತಿದೆ ಎಂಬುದರ ಬಗ್ಗೆ ಹಾಗೂ ಆಹಾರ ಶೈಲಿಯ ಬಗ್ಗೆ ಹೊರದೇಶ ಹಾಗೂ ಪಕ್ಕದ ಜಿಲ್ಲೆಯವರೆಗೆ ತಿಳಿಸಲು ಈ ಯೋಜನೆ ಉಪಯುಕ್ತ ವಾಗಿದ್ದು, ನಿಮ್ಮ ಜಿಲ್ಲೆಯಲ್ಲಿಯೂ ಸಹ ಅಗ್ರಿ ಟೂರಿಸಂಗೆ ಸೂಕ್ತವಾದ ಜಾಗವನ್ನು ಗುರುತಿಸಿ ಮಾಹಿತಿ ನೀಡಲು ಸೂಚಿಸಿದರು.



