ಅಡಿಕೆ ಬೆಳೆಯಲ್ಲಿ ಅಣಬೆ ರೋಗದ ವೈಜ್ಞಾನಿಕ ನಿಯಂತ್ರಣ ಹೇಗೆ ..?

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ಡಿವಿಜಿ ಸುದ್ದಿ, ಚನ್ನಗಿರಿ: ತೋಟಗಾರಿಕೆ ಇಲಾಖೆ ಚನ್ನಗಿರಿ ಹಾಗೂ ಐ ಸಿ ಎ ಆರ್-ತರಳುಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ ಇವರ ವತಿಯಿಂದ ಚನ್ನಗಿರಿ ತಾಲ್ಲೂಕಿನ ಉಬ್ರಾಣಿ ಹೋಬಳಿಯಲ್ಲಿ ಅಡಿಕೆ ಬೆಳೆಗೆ ಅಣಬೆ ರೋಗ ಹೆಚ್ಚಾಗಿರುವ ಕಾರಣಕ್ಕೆ ವೈಜ್ಞಾನಿಕ ಕ್ಷೇತ್ರ ಭೇಟಿ ಹಾಗೂ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.

ಭೇಟಿಯ ಸಂದರ್ಭದಲ್ಲಿ ಕೇಂದ್ರದ ತೋಟಗಾರಿಕೆ ವಿಜ್ಞಾನಿಗಳಾದ ಶ್ರೀ ಬಸವನಗೌಡ ಎಂ ಜಿ ಮಾತನಾಡಿ ಅಣಬೆ ರೋಗ ಅಡಿಕೆ ತೋಟಗಳಿಗೆ ಕ್ಯಾನ್ಸರ್ ಇದ್ದಂತೆ. ಇದು ಗ್ಯಾನೋಡರ್ಮಾ ಲೂಸಿಡರ್ಮ್ ಎಂಬ ಶಿಲೀಂದ್ರದಿಂದ ಬರುತ್ತದೆ. ತೋಟಗಳಲ್ಲಿ ಅವೈಜ್ಞಾನಿಕ ಪೋಷಕಾಂಶಗಳ ನಿರ್ವಹಣೆ, ನೀರು ಬಸಿಯದೆ ಇರುವುದು, ಕಪ್ಪು ಜಿಗುಟು ಮಣ್ಣಿನಲ್ಲಿ ನಿರ್ಮಿಸಿರುವ ತೋಟಗಳು, ಗದ್ದೆ ತೆಗೆದು ತೋಟ ಮಾಡಿರುವ ಭೂಮಿಗಳು, ಅತಿ ಹೆಚ್ಚು ಕೆರೆ ಗೋಡು ಮಣ್ಣನ್ನು ಹಾಕಿರುವ ತೋಟಗಳಲ್ಲಿ ಈ ಭಾಧೆ ಹೆಚ್ಚು ಎಂದು ತಿಳಿಸಿದರು.

arecanut

ಪ್ರಾರಂಭದಲ್ಲಿ ಅಡಿಕೆ ಗಿಡದ ಕೆಳಗಿನ ಎಲೆಗಳು ಹಳದಿಯಾಗಿರುವುದು, ನಂತರ ಅವುಗಳು ಕಾಂಡಕ್ಕೆ ನೇರವಾಗಿ ಜೋತು ಬೀಳುವುದು ಹಾಗೂ ಭಾದಿತ ಗಿಡಗಳ ಬುಡದಲ್ಲಿ ಕಾಂಡದಿಂದ ಕೆಂಪು ರಸ ಸೋರುವುದು ಈ ರೋಗದ ಪ್ರಮುಖ ಲಕ್ಷಣಗಳು.  ತೀವ್ರವಾಗಿ ಹಾನಿಯಾದ ಮರಗಳಲ್ಲಿ ಸುಳಿ ಸಂಪೂರ್ಣವಾಗಿ ಉದುರಿ ಬುಡದಲ್ಲಿ ಅಣಬೆ ಕಾಣಿಸಿಕೊಳ್ಳುತ್ತದೆ ಎಂದು ಅಣಬೆ ರೋಗದ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು.

ಇಂತಹ ತೋಟಗಳಲ್ಲಿ ಹಾಯಿ ನೀರಾವರಿ ಅನುಸರಿಸಿದರೆ ರೋಗ ಬೇಗನೆ ಇತರ ಮರಗಳಿಗೆ ಹರಡುವುದು ಹಾಗೂ ಒಮ್ಮೆ ಕಾಣಿಸಿಕೊಂಡ ಜಾಗದಲ್ಲಿ ಸುತ್ತ ಹತ್ತಾರು ಗಿಡಗಳನ್ನು ಬಲಿ ತೆಗೆದುಕೊಳ್ಳುವುದು ಎಂದು ತಿಳಿಸಿದರು.  ಹಾಗಾಗಿ ಇದರ ವೈಜ್ಞಾನಿಕ ನಿರ್ವಹಣೆಯ ಅವಶ್ಯಕತೆಯಿದೆಯೆಂದು ಭೇಟಿಯ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

arecanut crop guideline

ಈ ರೋಗದ ನಿರ್ವಹಣೆಗೆ ಲಕ್ಷಣಗಳು ಕಂಡು ಬಂದ ಸಂದರ್ಭದಲ್ಲಿ ತಕ್ಷಣವೇ ಪ್ರೋಪಿಕೋನೊಜೋಲ್ ಶಿಲೀಂದ್ರ ನಾಶಕವನ್ನು 2 ಮಿಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಪ್ರತಿ ಗಿಡಕ್ಕೆ 4 ರಿಂದ 5 ಲೀಟರ್ ದ್ರಾವಣವನ್ನು ಹಾಕಬೇಕು.  ಸುತ್ತ ಇರುವ ಹತ್ತು ಗಿಡಗಳಿಗೆ ಉಪಚರಿಸಿದರೆ ಇನ್ನೂ ಉತ್ತಮ. ಇದೇ ಮಿಶ್ರಣವನ್ನು ಒಂದು ತಿಂಗಳ ಬಳಿಕ ಪುನರಾವರ್ತಿಸಬೇಕು.

arrecanut

ಈ ರೋಗಾಣುವನ್ನು ಯಶಸ್ವಿಯಾಗಿ ಮಣಿಸಲು ಪ್ರತಿ ಮಳೆಗಾಲದಲ್ಲಿ ಅರ್ಕಾ ಸೂಕ್ಷ್ಮಾಣು ಜೀವಿಗಳ ಮಿಶ್ರಣವನ್ನು(ದ್ರವ ರೂಪದ) ಜೀವಾಮೃತದ ಜೊತೆಗೆ ಮಿಶ್ರಣ ಮಾಡಿ ಪ್ರತಿ ಗಿಡಕ್ಕೆ 1 ಲೀಟರ್ ಪ್ರಮಾಣದಂತೆ,  ಭೂಮಿ ಹಸಿ ಇರುವಾಗಲೇ ನೀಡಿದರೆ ಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳು ಹೆಚ್ಚಾಗಿ ರೋಗ ಹತೋಟಿಗೆ ಬರುತ್ತದೆ ಎಂದು ತಿಳಿಸಿದರು. ಇದನ್ನು ಪೌಡರ್ ರೂಪದಲ್ಲಿ ನೀಡುವುದಾದರೆ ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳು ಗೊಬ್ಬರದ ಜೊತೆಗೆ ಪ್ರತಿ ಕ್ಷಿಂಟಾಲ್ ಗೊಬ್ಬರಕ್ಕೆ ಒಂದು ಕೆ.ಜಿ. ಅರ್ಕಾ ಮೈಕ್ರೋಬಿಲಿಯಲ್ ಮಿಶ್ರಣವನ್ನು ಸೇರಿಸಿ, ಭೂಮಿಗೆ ಎರಚುವುದು.

ಮುಂಗಾರಿನಲ್ಲಿ ಪ್ರತಿ ಗಿಡಕ್ಕೆ 2-3 ಕೆ.ಜಿ. ಬೇವಿನ ಪೌಡರ್, 150 ಗ್ರಾಂ ಪೊಟ್ಯಾಷ್, 150 ಗ್ರಾಂ 15-15-15 ರಸಗೊಬ್ಬರ ಮತ್ತು 100 ಗ್ರಾಂ ಲಘು ಪೋಷಕಾಂಶಗಳ ಮಿಶ್ರಣವನ್ನು (AMN) 10 ವರ್ಷ ಮೇಲ್ಪಟ್ಟ ತೋಟಗಳಿಗೆ ಹಾಕಬೇಕು. ಅಣಬೆ ರೋಗ ಭಾಧಿತ ಗಿಡಗಳ ಸುತ್ತ ತಾಕಿನಲ್ಲಿ ನೀರು ನಿಲ್ಲದಂತೆ, ಇಳಿಜಾರಿಗನುಗುಣವಾಗಿ  ಬಸಿಗಾಲುವೆಗಳನ್ನು ತೆಗೆಯುವುದರಿಂದಲೂ ರೋಗ ಹರಡುವುದನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.

arecanut 2

ಚನ್ನಗಿರಿ ತಾಲ್ಲೂಕಿನಲ್ಲಿ ಒಟ್ಟು 32000  ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದು, ತಾಲ್ಲೂಕಿನ ಕೆಲವು  ಗ್ರಾಮಗಳಲ್ಲಿ ಅಣಬೆ ರೋಗ ಕಂಡುಬಂದಿದ್ದು, ಇದರ ನಿಯಂತ್ರಣಕ್ಕೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಹಯೋಗದೊಂದಿಗೆ ರೈತರಿಗೆ ಜಾಗೃತಿ ಮೂಡಿಸುವ ವೈಜ್ಞಾನಿಕ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀ ಎಂ. ಜಿ. ರೋಹಿತ್ ತಿಳಿಸಿದರು.

ತಾಲ್ಲೂಕಿನ ನೆಲ್ಲಿಹಂಕಲು, ಚಿಕ್ಕಸಂದಿ, ಖಗ್ಗಿ, ಗ್ರಾಮಗಳಿಗೆ ವಿಜ್ಞಾನಿಗಳು ಭೇಟಿ ನೀಡಿ, ವೈಜ್ಞಾನಿಕ ಮಾಹಿತಿಯನ್ನು ನೀಡಿದರು. ಸಹಾಯಕ ತೋಟಗಾರಿಕೆ ಅಧಿಕಾರಿ ಶ್ರೀ ಮಂಜುನಾಥ ಬಿ. ಹಾಜರಿದ್ದರು. ರೈತರುಗಳಾದ ಕುಭೇಂದ್ರಪ್ಪ, ರಾಜೇಶ್, ಎನ್. ಎಂ. ಭೋಜರಾಜ್, ಸಿದ್ದರಾಮಪ್ಪ, ಲಿಂಗರಾಜ್, ಕಿರಣ್, ಸುದರ್ಶನ್, ಗಿರೀಶ್, ಜಗದೀಶ್ ಇತರರು ಹಾಜರಿದ್ದರು. ನೆಲ್ಲಿಹಂಕಲು, ಚಿಕ್ಕಾಸಂಧಿ, ಖಗ್ಗಿ, ತಾವರೆಕೆರೆ, ಗಂಗಗೊಂಡನಹಳ್ಳಿ  ಸುತ್ತ ಮುತ್ತಲ ಗ್ರಾಮಗಳ ರೈತರು ಹಾಜರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *