ಜಿನಿವಾ: ಕೊರೊನಾ ಮಹಾಮಾರಿಗೆ ಇಡೀ ಜಗತ್ತೇ ತತ್ತರಿಸಿ ಹೋಗಿದ್ದು, ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಇದರ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ(WHO) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಕೊರೊನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲು ಇನ್ನೂ ಎರಡು ವರ್ಷ ಬೇಕು ಎಂದು ಹೇಳಿದೆ.
1918ರಲ್ಲಿ ಕಾಣಿಸಿಕೊಂಡಿದ್ದ ಸ್ಪ್ಯಾನಿಷ್ ಜ್ವರ ಎರಡು ವರ್ಷಗಳ ಕಾಲ ಜಗತ್ತನ್ನು ಕಾಡಿತ್ತು. ಈಗ ಒಂದು ವೇಳೆ, ಲಸಿಕೆ ಪತ್ತೆ ಹಚ್ಚಲು ಯಶಸ್ವಿಯಾದರೆ, ಕೊರೊನಾ ವೈರಸ್ ಪಿಡುಗು ಎರಡು ವರ್ಷ ಅವಧಿಯಲ್ಲಿ ಕೊನೆಗೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅದಾನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ.

ಲಸಿಕೆ ಇಲ್ಲದ ಹೊತ್ತಿನಲ್ಲಿ ಸಾಂಕ್ರಾಮಿಕ ರೋಗವು ಎಷ್ಟು ಬೇಗ ನಿಯಂತ್ರಣಕ್ಕೆ ಬರಬಹುದು ಎಂಬುದರ ಬಗ್ಗೆ ಮಾಹಿತಿ ನೀಡುವ ವಿಷಯದಲ್ಲಿ ಆರೋಗ್ಯ ಸಂಸ್ಥೆ ಜಾಗರೂಕವಾಗಿರುತ್ತದೆ ಎಂದು ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಕೊರೊನಾ ವೈರಸ್ ಬೇಗನೇ ವ್ಯಾಪಿಸುತ್ತಿದೆ. ನಾವೆಲ್ಲರೂ ಪರಸ್ಪರ ಬೆಸೆದುಕೊಂಡಿರುವ ಕಾರಣಕ್ಕೆ ಅದು ಬೇಗ ಹರಡಿದೆ. ಕೊರೊನಾ ವೈರಸ್ ಅನ್ನು ತಡೆಯುವ ತಂತ್ರಜ್ಞಾನ ಮತ್ತು ಜ್ಞಾನ ನಮ್ಮ ಬಳಿ ಇದೆ. ಹೀಗಾಗಿ ನಾವು ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ವೈರಸ್ ಅನ್ನು ಅಂತ್ಯಗೊಳಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಗತ್ತಿನ 2,28,68,238 ಮಂದಿಗೆ ಕೊರೊನಾ ವೈರಸ್ ತಗುಲಿದ್ದು, 7,97,871 ಮಂದಿ ಮೃತಪಟ್ಟಿದ್ದಾರೆ. 1,57,09,677 ಮಂದಿ ಗುಣಮುಖರಾಗಿದ್ದಾರೆ.



