ಡಿವಿಜಿ ಸುದ್ದಿ, ದಾವಣಗೆರೆ: ನಗರದ ಹದಡಿ ರಸ್ತೆಯನ್ನು ಆರೂಢ ದಾಸೋಹಿ ಮಾಗನೂರು ಬಸಪ್ಪ ರಸ್ತೆಯನ್ನಾಗಿ ಹಾಗೂ ಐಟಿಐ ಕಾಲೇಜು ವೃತ್ತಕ್ಕೆ ತರಳಬಾಳು ವೃತ್ತ ಎಂದು ನಾಮಕರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಬಿ.ಜಿ. ಅಜಯ್ ಕುಮಾರ್, ದಾವಣಗೆರೆ ಮಹಾನಗರ ಪಾಲಿಕ ವಿಪಕ್ಷ ನಾಯಕ ಎ. ನಾಗರಾಜ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಶಿವಯೋಗಿ ಸ್ವಾಮಿ, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಕೆ. ಪ್ರಸನ್ನ ಕುಮಾರ್, ಕೆ.ಎಂ. ವೀರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಬಹಳ ದಿನಗಳಿಂದ ತರಳಬಾಳು ವೃತ್ತ, ಮಾಗನೂರು ಬಸಪ್ಪ ರಸ್ತೆ ಹೆಸರಿಡಲು ತೀರ್ಮಾನಿಸಲಾಗಿತ್ತು. ಏಳು ವರ್ಷದ ಮಹಾನಗರ ಪಾಲಿಕೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅನುಮತಿಯೂ ದೊರೆತಿತ್ತು. ಕಾರಣಾಂತರದಿಂದ ಅನಾವರಣ ಆಗಿರಲಿಲ್ಲ. ಮಹಾನಗರ ಪಾಲಿಕೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅನಾವರಣಗೊಳಿಸಲಾಗಿದೆ ಎಂದರು.
ಬೆಂಗಳೂರಿನ ದೇವರ ಜೀವನಹಳ್ಳಿ, ಕೆಜಿ ಹಳ್ಳಿ ಗಲಭೆ ದುರಾದೃಷ್ಟಕರ. ಶಾಸಕರ ಮನೆ ಮೇಲೆ ದಾಳಿ ನಡೆಸಿರುವುದು ಮನುಷ್ಯತ್ವವೇ ಇಲ್ಲದವರ ಕೃತ್ಯ. ಗಲಭೆಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.



