ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ಲಕ್ಷಣಗಳಿಲ್ಲದೇ ಮೃತಪಟ್ಟಿದ್ದಲ್ಲಿ ಕೋವಿಡ್ ಪರೀಕ್ಷೆ ನಡೆಸುವ ಅಗತ್ಯವಿಲ್ಲ. ಮೃತದೇಹ ಮುಟ್ಟದೇ ಅಂತ್ಯ ಸಂಸ್ಕಾರದ ವಿಧಿಗಳಿಗೆ ಅವಕಾಶ ಕಲ್ಪಿಸಿ ಆರೋಗ್ಯ ಇಲಾಖೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.
ಸಾವಿಗೂ ಮುನ್ನ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ ಬಳಲಿದವರು, ತೀವ್ರ ಉಸಿರಾಟದ ಸಮಸ್ಯೆ ಹೊಂದಿದ್ದವರು ಸೇರಿದಂತೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವರಿಗೆ ಮಾತ್ರ ಪರೀಕ್ಷೆ ನಡೆಸಬೇಕು ಎಂದು ಇಲಾಖೆ ಸೂಚಿಸಿದೆ.
ಶಂಕಿತ ವ್ಯಕ್ತಿ ಮೃತಪಟ್ಟ 6 ಗಂಟೆಗಳ ಒಳಗಡೆ ಅವರ ಗಂಟಲ ದ್ರವವನ್ನು ಪಡೆದು, ಕೋವಿಡ್ ಪರೀಕ್ಷೆಗೆ ಪ್ರಯೋಗಾಲಯಗಳಿಗೆ ರವಾನಿಸಬೇಕು. ವರದಿಗಾಗಿ ಕಾಯದೇ, ಕೋವಿಡ್ ರೋಗಿಗೆ ಅನುಸರಿಸುವ ಮುಂಜಾಗ್ರತೆ ಕ್ರಮಗಳನ್ನೇ ಪಾಲಿಸಿ, ಅಂತ್ಯಸಂಸ್ಕಾರ ನೆರವೇರಿಸಬೇಕು. ಅಂತ್ಯಸಂಸ್ಕಾರದಲ್ಲಿ 20 ಮಂದಿ ಪಾಲ್ಗೊಳ್ಳಲು ಅವಕಾಶ ನೀಡಿದೆ.
ಕೊರೊನಾ ಸೋಂಕಿತ ಮೃತರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸಬೇಕು. ಮೃತ ವ್ಯಕ್ತಿಯ ಶ್ವಾಸಕೋಶ ಮಾತ್ರ ಸೋಂಕಿತವಾಗಿರುತ್ತದೆ. ವ್ಯಕ್ತಿ ಉಸಿರಾಟ ನಿಲ್ಲಿಸಿದ ಬಳಿಕ ಸೋಂಕು ಹರಡುವುದಿಲ್ಲ. ಆದರೆ, ಮೃತ ವ್ಯಕ್ತಿಯ ದೇಹವನ್ನು ಸ್ಪರ್ಶಿಸುವುದು, ಸ್ನಾನ ಮಾಡಿಸುವುದು, ಚುಂಬಿಸುವುದು ಮಾಡಬಾರದು. ಒಮ್ಮೆ ಶರೀರವನ್ನು ಚೀಲದಲ್ಲಿ ಇರಿಸಿದ ಬಳಿಕ ಕುಟುಂಬದ ಸದಸ್ಯರು ಮೃತ ವ್ಯಕ್ತಿಯನ್ನು ನೋಡಲು ಇಚ್ಛಿಸಿದಲ್ಲಿ ಮುಖದ ಭಾಗವನ್ನು ಮಾತ್ರ ತೋರಿಸಬೇಕು. ಅಗತ್ಯ ಸುರಕ್ಷತಾ ಸಾಧನಗಳನ್ನು ಧರಿಸಿ, ಅಂತ್ಯಸಂಸ್ಕಾರ ನಡೆಸಬೇಕು. ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ, ಬೆಂಗಳೂರಿನಲ್ಲಿ ಬಿಬಿಎಂಪಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿದೆ.



