ಡಿವಿಜಿ ಸುದ್ದಿ, ಉಡುಪಿ: ರಾಮ ಮಂದಿರ ನಿರ್ಮಾಣದಿಂದ ಕೊರೊನಾ ದೂರವಾಗಲ್ಲ. ಬಿಜೆಪಿಯವರು ಅವೈಜ್ಞಾನಿಕವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರದ ಉದ್ದೇಶದ ದುರುಪಯೋಗ ಬೇಡ. ರಾಮ ಮಂದಿರ ನಿರ್ಮಾಣವನ್ನು ಸ್ವಾಗತಿಸುತ್ತೇವೆ. ಭವ್ಯವಾದ ರಾಮ ಮಂದಿರ ನಿರ್ಮಾಣ ಆಗಲಿ. ಮಂದಿರಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಉದ್ದೇಶ ದುರುಪಯೋಗ ಆಗುವುದು ಬೇಡ ಎಂದರು.
ರಾಜ್ಯದಲ್ಲಿ ಕೊರೊನಾ ಚಿಕಿತ್ಸಾ ಸಲಕರಣೆಗಳ ಖರೀದಿಯಲ್ಲಿ ವ್ಯಾಪಕ ಲೂಟಿಯಾಗಿದೆ. ಕಾಂಗ್ರೆಸ್ ಆರೋಪ ಮಾಡಿ 25 ದಿನವಾದರೂ ಉತ್ತರ ಸಿಕ್ಕಿಲ್ಲ. ಯಾವುದೇ ಮಾಹಿತಿ ವಿಪಕ್ಷ ನಾಯಕರಗೆ ಬಂದಿಲ್ಲ. ವೆಂಟಿಲೇಟರ್, ಪಿಪಿಇ ಕಿಟ್, ಸ್ಯಾನಿಟೈಸರ್ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದೆ. ಮೂರರಿಂದ ನಾಲ್ಕು ಪಟ್ಟು ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಕೊರೊನಾ ಸಲಕರಣೆ ಖರೀದಿಯಲ್ಲೂ ಶೇಕಡಾ 50ರಷ್ಟು ಲೂಟಿಯಾಗಿದೆ ಎಂದು ಆರೋಪಿಸಿದ್ದಾರೆ.



