ನವದೆಹಲಿ: ಉತ್ತಮ ಆಡಳಿತಗಾರನಾಗಿ ಸಾಕಷ್ಟು ಅನುಭವವುಳ್ಳ ಸೌರವ್ ಗಂಗೂಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಮುಖ್ಯಸ್ಥ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಶ್ರೀಲಂಕಾ ಕ್ರಿಕೆಟಿಗ ಕುಮಾರ್ ಸಂಗಕ್ಕಾರ ಅಭಿಪ್ರಾಯಪಟ್ಟಿದ್ದಾರೆ.
ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್, ವಿಶಾಲ ಮನೋಭಾವ ಹೊಂದಿದ್ದು, ಐಸಿಸಿ ಮುಖ್ಯಸ್ಥನ ಹುದ್ದೆಯನ್ನು ಪಕ್ಷಪಾತವಿಲ್ಲದೆ ನಿರ್ವಹಿಸಬಲ್ಲರು. ನಾನು ಅವರ ಅಭಿಮಾನಿ ಎಂದು ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಅಧ್ಯಕ್ಷ ಸಂಗಕ್ಕಾರ ಖಾಸಗಿ ವಾಹಿನಿಗೆ ತಿಳಿಸಿದ್ದಾರೆ.

ಗಂಗೂಲಿ ಅವರು ಬಿಸಿಸಿಐ ಅಥವಾ ಇನ್ನಾವುದೇ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಎಂಬ ಕಾರಣಕ್ಕೆ ಹೇಳುತ್ತಿಲ್ಲ. ಕ್ರಿಕೆಟ್ ಆಟಗಾರರ ಮಧ್ಯೆ ಸಂಬಂಧಗಳನ್ನು ಬೆಸೆಯುವ ಸಾಮರ್ಥ್ಯ ಗಂಗೂಲಿ ಅವರಲ್ಲಿದೆ. ಐಸಿಸಿಯ ಮಹತ್ವದ ಹುದ್ದೆಗೆ ಇಂತಹ ಗುಣ ಅತ್ಯಗತ್ಯ ಎಂದಿದ್ದಾರೆ.
ಐಸಿಸಿ ಮುಖ್ಯಸ್ಥರಾಗಿದ್ದ ಶಶಾಂಕ್ ಮನೋಹರ್ ಈ ತಿಂಗಳ ಆರಂಭದಲ್ಲಿ ಹುದ್ದೆ ತೊರೆದಿದ್ದರು. ಐಸಿಸಿ ಮುಖ್ಯಸ್ಥನ ಹುದ್ದೆಗೆ ಗಂಗೂಲಿ ಅವರನ್ನು ಸಂಗಕ್ಕಾರ ಮಾತ್ರವಲ್ಲದೆ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಗ್ರೇಮ್ ಸ್ಮಿತ್ ಕೂಡ ಬೆಂಬಲಿಸಿದ್ದರು.



