ಡಿವಿಜಿ ಸುದ್ದಿ, ಬೆಂಗಳೂರು: ಸಾವಿರ ಜನರನ್ನು ಗುಂಪು ಕಟ್ಟಿಕೊಂಡರಷ್ಟೇ ನಾಯಕ ಆಗಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋದಾಗ ಮಾತ್ರ ನಾಯಕನಾಗಲು ಸಾಧ್ಯ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಕೊರೊನಾ ಹಾಗೂ ಲಾಕ್ಡೌನ್ ಹಿನ್ನೆಲೆ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಶಿವರಾಜ್ ಕುಮಾರ್ ಮನೆಯಲ್ಲಿ ಸಭೆ ನಡೆಸಲಾಯಿತು. ನಾಗಾವರದ ಶಿವರಾಜ್ ಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಅದರ ಸಂಸ್ಥೆಗಳು ಹಾಗೂ ಅದರ ಅಂಗ ಸಂಸ್ಥೆಗಳು ಭಾಗಿಯಾಗಿದ್ದವು.
ನಂತರ ಮಾತನಾಡಿದ ಶಿವರಾಜ್ ಕುಮಾರ್, ಚಿತ್ರರಂಗದ ಎಲ್ಲ ವಿಭಾಗಗಳಿಂದ ಒಗ್ಗಟ್ಟಾಗಿ ಬಂದಿರುವುದು ಸಂತಸ ತಂದಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಅನೇಕ ಸಮಸ್ಯೆಗಳನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ. ಕೊರೊನಾ ಏನೂ ದೊಡ್ಡ ವಿಷಯವಲ್ಲ, ಅದನ್ನು ಹೋಗಲಾಡಿಸಬಹುದು. ಮೂರು, ನಾಲ್ಕು ದಿನಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಿ, ಅದರಲ್ಲಿ ರಾಜ್ಯ ಸರ್ಕಾರಕ್ಕೆ ಯಾವ ರೀತಿ ಮನವಿ ಸಲ್ಲಿಸಬೇಕು ಎಂಬುದರ ಬಗ್ಗೆ ಚರ್ಚಿಸುತ್ತೇವೆ ಎಂದರು.

ನನಗೆ ಯಾವ ನಾಯಕತ್ವ ಮುಖ್ಯವಲ್ಲ. ಎಲ್ಲರ ಜೊತೆಯಲ್ಲಿ ಹೋಗುತ್ತೇನೆ. ಇಂಡಸ್ಟ್ರಿ ಸಮಸ್ಯೆ ಚರ್ಚಿಸಲು ಸರ್ಕಾರದ ಬಳಿ ಹೋಗಲು ತೀರ್ಮಾನ ಮಾಡಿದ್ದೇವೆ. ಸರ್ಕಾರದ ಮುಂದೆ ಹೋಗುವ ಮುನ್ನ ನಾವು ಏನು ಮಾಡಿದ್ದೇವೆ ಎಂಬುದನ್ನು ತಿಳಿಯಬೇಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.
ಯಾರೂ ಧೈರ್ಯ ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ತಕ್ಷಣವೇ ಎಲ್ಲವೂ ಸರಿ ಹೋಗುತ್ತೆ ಅಂತ ಹೇಳಲು ಆಗುವುದಿಲ್ಲ. ಅದಕ್ಕೆ ಸಮಯ ಬೇಕು, ನಿಮ್ಮ ಜೊತೆ ನಾನು ಇದ್ದೇನೆ. ಎಲ್ಲರೂ ಧೈರ್ಯವಾಗಿರಿ ಎಂದು ಕಾರ್ಮಿಕರಿಗೆ ಧೈರ್ಯ ತುಂಬಿದರು.
ನಿರ್ಮಾಪಕ ಸಾ.ರಾ.ಗೋವಿಂದು ಮಾತನಾಡಿ, ಕೊರೊನಾ ಸಮಯದಲ್ಲಿ ಚಿತ್ರರಂಗ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಎಲ್ಲ ರಂಗಕ್ಕೂ ಪ್ಯಾಕೆಜ್ ಘೋಷಿಸಲಾಗಿದೆ. ಆದರೆ, ಚಿತ್ರರಂಗದ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಸರ್ಕಾರದ ಮುಂದೆ ತಮ್ಮ ಬೇಡಿಕೆ ಈಡೇರಿಸಲು ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ ಎಂದರು.
ಸಭೆಯಲ್ಲಿ ಸಾಧುಕೋಕಿಲ, ಜಯಣ್ಣ, ಸೂರಪ್ಪ ಬಾಬು, ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಸಾರಾ ಗೋವಿಂದು, ಕೆ.ಮಂಜು, ಗುರುಕಿರಣ್, ಭೋಗೇಂದ್ರ, ಸುರೇಶ್ ಕುಮಾರ್, ಭಾಮ ಹರೀಶ್, ಎ.ಗಣೇಶ್, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಕೋಟಿ ರಾಮು, ನಿರ್ಮಾಪಕ ವಿತರಕ ಚಿನ್ನೇಗೌಡ, ಕಾರ್ತಿಕ್ ಗೌಡ, ಛಾಯಾಗ್ರಾಹಕ ಸಂಘದ ಅಧ್ಯಕ್ಷ ಜೆ.ಜೆ.ಕೃಷ್ಣ ಸೇರಿದಂತೆ ಮತ್ತಿತರರು ಇದ್ದರು.



