ಡಿವಿಜಿ ಸುದ್ದಿ, ದಾವಣಗೆರೆ: ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಂಭವ ಇದೆ ಎಂದು ಕೆಲ ತಜ್ಞರು ತಿಳಿಸಿದ್ದು, ಆಸ್ಪತ್ರೆಯಲ್ಲಿ ಸಾಕಷ್ಟು ಬೆಡ್‍ಗಳು, ಆಂಬುಲೆನ್ಸ್, ವೆಂಟಿಲೇಟರ್ ಹೀಗೆ ಈಗಿನಿಂದಲೇ ಎಲ್ಲ ರೀತಿಯ ಸರ್ವ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಸೂಚನೆ ನೀಡಿದರು.
ಜಿಲ್ಲಾಡಳಿತದೊಂದಿಗೆ ವಿಡಿಯೋ ಸಂವಾದಲ್ಲಿ ಮಾತನಾಡಿದ ಅವರು, ಸ್ಥಳೀಯ ಶಾಸಕರ ಮಾರ್ಗದರ್ಶನಂತೆ ಜಿಲ್ಲಾಡಳಿತ, ಅಧಿಕಾರಿಗಳು ಕ್ರಮಗಳನ್ನು ಕೈಗೊಂಡು ಕೋವಿಡ್ ನಿಯಂತ್ರಣದೊಂದಿಗೆ ಇತರೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಮಳೆಗಾಲ ಚುರುಕಾಗಿರುವುದರಿಂದ ನಗರದಲ್ಲಿ ರೋಗ ರುಜಿನಗಳು ಹೆಚ್ಚಾಗುವ ಸಂಭವ ಇರುತ್ತದೆ. ಆದ ಕಾರಣ ಪಾಲಿಕೆ ವತಿಯಿಂದ ನಗರ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಪೌರಕಾರ್ಮಿಕರ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸಬೇಕು. ಅವರಿಗೆ ಸುರಕ್ಷತಾ ಸಾಮಗ್ರಿಗಳೊಂದಿಗೆ ಕೋವಿಡ್ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಖಾದ್ಯಗಳನ್ನು ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರಲ್ಲದೇ ಇನ್ನೊಮ್ಮೆ ನಗರದಾದ್ಯಂತ ಸ್ಯಾನಿಟೈಸ್ ಮಾಡಿಸುವಂತೆ ಹೇಳಿದರು.
ಮಾಸ್ಕ್ ಕಡ್ಡಾಯ : ಮಾಸ್ಕ್ ಧರಿಸದೇ ಇರುವವರ ವಿರುದ್ದ ದಂಡ ವಿಧಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕ್ರಮ ವಹಿಸಬೇಕು. ಗುಂಪು ಸೇರುವುದನ್ನು ತಡೆಯಬೇಕು. ಸಾಮಾಜಿಕ ಅಂತರ, ಮಾಸ್ಕ್ ಧಾರಣೆಯಿಂದ ಕೋವಿಡ್ ನಿಯಂತ್ರಣ ಸಾಧ್ಯವಿದ್ದು ಎಲ್ಲರೂ ಇದನ್ನು ಪಾಲಿಸುವಂತೆ ನಿಗಾಗ ವಹಿಸಬೇಕು.
ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಇತರೆ ವಸ್ತುಗಳ ಪೂರೈಕೆಯಲ್ಲಿ ಲೋಪ ಬಾರದಂತೆ ಕ್ರಮ ವಹಿಸಬೇಕು. ತೋಟಗಾರಿಕೆ ಬೆಳೆಗಳಾದ ತರಕಾರಿ ಮತ್ತು ಹೂವು ಪರಿಹಾರ ಧನ ಸಮರ್ಪಕವಾಗಿ ರೈತರಿಗೆ ವಿತರಣೆಯಾಗಬೇಕು. ಎಪಿಎಂಸಿ ವಹಿವಾಟುಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರಾತಂಕವಾಗಿ ನಡೆಯುವಂತೆ ಕ್ರಮ ವಹಿಸಬೇಕು. ನರೇಗಾ ಯೋಜನೆಯಡಿ ಕಾಮಗಾರಿಗಳು ಸುಸೂತ್ರವಾಗಿ ನಡೆಯುವಂತೆ ಹಾಗೂ ಕಾರ್ಮಿಕರಿಗೆ ವೇತನ ಸಮರ್ಪಕವಾಗಿ ಪಾವತಿಯಾಗುವಂತೆ ಸಿಇಓ ಕ್ರಮ ವಹಿಸಬೇಕೆಂದು ತಿಳಿಸಿದರು. ಹಾಗೂ ಪೊಲೀಸ್ ಸಿಬ್ಬಂದಿಗಳ ಸ್ವಾಬ್ ಪರೀಕ್ಷೆ ನಡೆಸುವಂತೆ ಎಸ್‍ಪಿಯವರಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಮಾಹಂತೇಶ್ ಬೀಳಗಿ ಮಾತನಾಡಿ, ಕೋವಿಡ್ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಒಟ್ಟು 1478 ಬೆಡ್‍ಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ ಈ ಪೈಕಿ ಪ್ರಸ್ತುತ 207 ಬೆಡ್‍ಗಳ ಬಳಕೆ ಮಾಡಿಕೊಳ್ಳಲಾಗಿದೆ. ಇನ್ನೂ 1271 ಬೆಡ್‍ಗಳು ಲಭ್ಯವಿದೆ. ಜಿಲ್ಲೆಯಲ್ಲಿ 76 ಆಂಬುಲೆನ್ಸ್‍ಗಳಿದ್ದು ಹೆಚ್ಚುವರಿಯಾಗಿ 8 ಆಂಬುಲೆನ್ಸ್‍ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೆಜೆಎಂ ಮತ್ತು ಎಸ್‍ಎಸ್ ಮೆಡಿಕಲ್ ಕಾಲೇಜಿನ ಲ್ಯಾಬ್‍ಗೆ ತಲಾ 150 ಮತ್ತು ಜಿಲ್ಲಾಸ್ಪತ್ರೆ ಲ್ಯಾಬ್‍ಗೆ 300 ಸ್ವಾಬ್ ಟೆಸ್ಟ್‍ಗೆ ಗುರಿ ನೀಡಲಾಗಿದೆ. ಹಾಗೂ ಜಿಲ್ಲೆಗೆ ದಿನವೊಂದಕ್ಕೆ 640 ಸ್ವಾಬ್ ಸಂಗ್ರಹಕ್ಕೆ ಗುರಿ ನಿಗದಿಯಾಗಿದೆ. ಆದರೆ ಜೂನ್ ಮತ್ತು ಜುಲೈ ಮಾಹೆಯಲ್ಲಿ ತಲಾ 12 ಸಾವಿರದಷ್ಟು ಸ್ವಾಬ್ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಗರ ಭಾಗದಲ್ಲಿ ಪ್ರತಿ ಬೂತ ಮಟ್ಟಕ್ಕೆ ಒಂದರಂತೆ ಟಾಸ್ಕ್‍ಪೋರ್ಸ್ ಸಮಿತಿ ರಚಿಸಿ ಕೋವಿಡ್ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ. ಈ ಸಮಿತಿಯಲ್ಲಿ 1492 ಸದಸ್ಯರಿದ್ದು ಯೂಟ್ಯೂಬ್ ಮೂಲಕ ಇಂದು ಅವರೆಲ್ಲರಿಗೆ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಪ್ರತಿ ಗ್ರಾ.ಪಂ ಮತ್ತು ಗ್ರಾಮಗಳಲ್ಲಿ ಒಂದೊಂದು ಟಾಸ್ಕ್‍ಫೋರ್ಸ್ ಸಮಿತಿ ರಚಿಸಿದ್ದು ಪಿಡಿಓ ಮತ್ತು ಆಡಳಿತಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ನರೇಗಾ ಯೋಜನೆಯಡಿ ದಿನವೊಂದಕ್ಕೆ 12 ಸಾವಿರ ಕಾರ್ಮಿಕರು ವಿವಿಧ ಕೆಲಸಗಳನ್ನು ಕೈಗೊಳ್ಳುತ್ತಿದ್ದು, ಅವರಿಗೆ ನೇರವಾಗಿ ಕೇಂದ್ರ ಸರ್ಕಾರದಿಂದ ಅವರ ಖಾತೆಗೆ ವೇತನ ಪಾವತಿಯಾಗುವುದು ಎಂದರು.
ಎಸ್‍ಪಿ ಹನುಮಂತರಾಯ ಮಾತನಾಡಿ, ಮಾತನಾಡಿ, ಪ್ರತಿ ತಾಲ್ಲೂಕುಗಳಲ್ಲಿ ತಂಡಗಳನ್ನು ರಚಿಸಿ ಕಂಟೈನ್‍ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜೊತೆಗೆ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತಿದೆ. ಮದುವೆ, ಸಮಾರಂಭಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಶೇ.99 ಪೊಲೀಸ್ ಸಿಬ್ಬಂದಿಗಳ ಪರೀಕ್ಷೆ ಮಾಡಿಸಲಾಗಿದೆ ಎಂದರು.
ಕೃಷಿ, ಎಪಿಎಂಸಿ, ತೋಟಗಾರಿಕೆ ಇಲಾಖಾ ಅಧಿಕಾರಿಗಳು, ಪಾಲಿಕೆ ಆಯುಕ್ತರು ತಮ್ಮ ಇಲಾಖೆಗಳ ಪ್ರಗತಿ ವಿವರ ನೀಡಿದರು. ಸಚಿವರು ಎಲ್ಲ ಇಲಾಖೆಗಳು ಕೋವಿಡ್ ನಿಯಂತ್ರಣದೊಂದಿಗೆ ಇತರೆ ಅಭಿವೃದ್ದಿ ಕಾಮಗಾರಿಗಳು, ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಎಸಿ ಮಮತಾ ಹೊಸಗೌಡರ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಹೆಚ್‍ಓ ಡಾ. ರಾಘವೇಂದ್ರಸ್ವಾಮಿ, ಡಿಎಸ್‍ಓ ಡಾ.ರಾಘವನ್, ಡಿಎಸ್ ಡಾ.ನಾಗರಾಜ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು ಹಾಜರಿದ್ದರು.