ಡಿವಿಜಿ ಸುದ್ದಿ, ದಾವಣಗೆರೆ: ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಪಡಿತರ ಅಕ್ಕಿ ಗೋದಾಮಿನ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ಮಾಡಿದ್ದು, 3.60 ಲಕ್ಷ ಮೌಲ್ಯದ 250 ಕ್ವಿಂಟಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆಯ ಅಣ್ಣಾನಗರದಲ್ಲಿರುವ ಕರಿಬಸವೇಶ್ವರ ರೈಸ್ ಮಿಲ್ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ 250 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಪಂಜಾಬ್ ರಾಜ್ಯದ ಪಡಿತರ ಚೀಲಗಳು ಸಹ ಪತ್ತೆಯಾಗಿವೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಉಪ ನಿರ್ದೇಶಕ ಮಂಟೇಸ್ವಾಮಿ ನೇತೃತ್ವದಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈಸ್ ಮಿಲ್ ಕೌಂಪೌಂಡ್ ನಲ್ಲಿ ಸುಮಾರು 500 ಚೀಲ ಪಡಿತರ ಅಕ್ಕಿಯನ್ನು ಸಂಗ್ರಹಿಸಿರುವ ಮಾಹಿತಿ ಬಂದಿತ್ತು. ಕೂಡಲೇ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ದಾಳಿ ಮಾಡಿದ್ದೇವೆ. ಈ ಸಂಬಂಧ ರೈಸ್ ಮಿಲ್ ಮಾಲೀಕ ಮತ್ತು ಸಂಬಂಧಪಟ್ಟವರ ಮೇಲೆ ಪ್ರಕಣ ದಾಖಲಿಸಲಾಗಿದೆ. ಈ ರೀತಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದರೆ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.



