ಡಿವಿಜಿ ಸುದ್ದಿ, ಮೈಸೂರು: ರಾಜ್ಯದಲ್ಲಿ ಕಾರವಳಿ, ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಡ್ಯಾಂ 100 ಅಡಿ ಭರ್ತಿಯಾಗಿದೆ. ಇನ್ನು ಕಬಿನಿ ಜಲಾಶಯಕ್ಕೆ ಒಳ ಹರಿವಿನ ನೀರಿನ ಮಟ್ಟ ಹೆಚ್ಚಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಡ್ಯಾಂ ಒಳ ಹರಿವು ಹೆಚ್ಚಾಗಿದೆ. ಮಂಗಳವಾರ ಬೆಳಗ್ಗೆ 6,324 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇಂದು 8972 ಕ್ಯೂಸೆಕ್‍ಗೆ ಏರಿಕೆಯಾಗಿದೆ. ಅಣೆಕಟ್ಟೆಯಲ್ಲಿ ಒಳ ಹರಿವು ಹೆಚ್ಚಾಗಿರುವುದರಿಂದ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.
ಕೆಆರ್ ಎಸ್ ಅಣೆಕಟ್ಟೆಯ ನೀರಿನ ಮಟ್ಟ 100.33 ಅಡಿಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಈ ಬಾರಿ 18 ಅಡಿ ನೀರು ಹೆಚ್ಚಾಗಿದೆ. ಕೆಆರ್‌ಎಸ್ ಅಣೆಕಟ್ಟೆಯ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದ್ದು, ಇಂದಿನ ನೀರಿನ ಮಟ್ಟ 100.33 ಅಡಿ ಆಗಿದೆ. ಅಣೆಕಟ್ಟೆ ಒಳಹರಿವು 8972 ಕ್ಯೂಸೆಕ್ ಆಗಿದ್ದು, ಹೊರ ಹರಿವು 458 ಕ್ಯೂಸೆಕ್ ಆಗಿದೆ. ಸದ್ಯ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರು 23.071 ಟಿಎಂಸಿ ಆಗಿದೆ.
ಇತ್ತ ಕೇರಳ ಭಾಗದಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಜಲಾಶಯದ ಒಳಹರಿವು 10 ಸಾವಿರ ಕ್ಯೂಸೆಕ್‍ಗೆ ದಾಟಿದೆ. ಜಲಾಶಯದ ಇಂದಿನ ಒಳಹರಿವು 11,324 ಕ್ಯೂಸೆಕ್ ಆಗಿದ್ದು, ಜಲಾಶಯದ ಇಂದಿನ ಹೊರಹರಿವು 1500 ಕ್ಯೂಸೆಕ್ ಆಗಿದೆ.
ಕಬಿನಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿ ಆಗಿದ್ದು, ಇಂದು 2267.88 ಅಡಿಯಷ್ಟು ನೀರು ಆಗಿದೆ. ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ19.50 ಟಿಎಂಸಿ ಆಗಿದ್ದು, ಈಗಾಗಲೇ 10.67 ಟಿಎಂಸಿ ನೀರು ಸಂಗ್ರಹವಾಗಿದೆ.



