ಡಿವಿಜಿ ಸುದ್ದಿ, ಬಳ್ಳಾರಿ: ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜುಲೈ 10ರಿಂದ ಅನಿರ್ದಿಷ್ಟವಾಗಿ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕರ್ಯಕರ್ತೆಯರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 30ರಂದು ರಾಜ್ಯದಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಆರೋಗ್ಯ ಸಚಿವ ಸೇರಿ ಎಲ್ಲ ಸಚಿವರು ಹಾಗೂ ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಅವರೂ ಹೇಳಿದ್ದಾರೆ.
ಈವರೆಗೆ ನಮಗೆ ಮುಖ್ಯಮಂತ್ರಿಗಳ ಕಚೇರಿಯಿಂದಾಗಲಿ, ಜಿಲ್ಲಾಧಿಕಾರಿ ಕಚೇರಿಯಿಂದಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಜುಲೈ 10 ರಿಂದ ಅನಿರ್ದಿಷ್ಟಾವಧಿ ಆರೋಗ್ಯ ಸೇವೆ ಸ್ಥಗಿತಗೊಳಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಕೇವಲ ಪ್ರಶಂಸೆಯಿಂದ ನಮ್ಮ ಹೊಟ್ಟೆ ತುಂಬುವುದಿಲ್ಲ. ಸರ್ಕಾರಕ್ಕೆ ನಮ್ಮ ಮೇಲೆ ನಿಜವಾದ ಗೌರವ ಇದ್ದರೆ, ಅಗತ್ಯ ಸೌಲಭ್ಯ ನೀಡಿ. ಕನಿಷ್ಠ 12 ಸಾವಿರ ಗೌರವಧನ ಹೆಚ್ಚಿಸಬೇಕು. ಜೊತೆ ಸೂಕ್ತ ರಕ್ಷಣಾ ಸಾಮಗ್ರಿಗಳನ್ನು ನೀಡಬೇಕು ಒತ್ತಾಯಿಸಿದರು.
ಸರ್ಕಾರ ನೀಡಿರುವ 3 ಸಾವಿರ ಗೌರವ ಧನ ಎಲ್ಲರಿಗೂ ಕೊಟ್ಟಿಲ್ಲ. ಕೆಲವೆಡೆಗಳಲ್ಲಿ ಕೊಟ್ಟಿರುವ ಚೆಕ್ ಗಳಲ್ಲಿ ಹಣವಿಲ್ಲ ಎಂದು ದೂರಿದರು.



