ಡಿವಿಜಿಸುದ್ದಿ.ಕಾಂ, ದಾವಣಗೆರೆ: ನನಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಿಗುತ್ತೆ ಅಂತಾ ಕನಸಿನಲ್ಲಿಯೂ ಯೋಚಿಸರಲಿಲ್ಲ.ಆದ್ರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಾವಣಗೆರೆ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದಾರೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮೊದಲ ಸಲ ದಾವಣಗೆರೆ ಜಿಲ್ಲಾ ಪಂಚಾಯತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳು ಅಣ್ಣ ತಮ್ಮಂದಿರ ರೀತಿ. ಎರಡು ಜಿಲ್ಲೆಗಳ ನಡುವೆ ಉತ್ತಮ ಬಾಂಧವ್ಯ ಇದೆ. ನಾನು ಜಿಲ್ಲಾ ಉಸ್ತುವಾರಿ ಸಚಿವ ಆಗುವುದಕ್ಕೂ ಮುನ್ನ ಅನೇಕ ಸಲ ದಾವಣಗೆರೆಗೆ ಭೇಟಿ ನೀಡಿದ್ದೇನೆ. ಈ ಜಿಲ್ಲೆಯಲ್ಲಿ ಅನೇಕ ಮಠಾಧೀಶರನ್ನು ಒಳಗೊಂಡ ಜಿಲ್ಲೆ.ಈ ಭಾಗದಲ್ಲಿ ಕೆರೆಗಳಿಗೆ ನೀರು ತುಂಬಿಸಲು ತರಳಬಾಳು ಶ್ರೀಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಜಗಳೂರು ಮತ್ತು ಭರಮಸಾಗರ ಕೆರೆಗಳಿಗೆ ನೀರು ತುಂಬಿಸಲು ಈಗಾಗಲೇ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಜಿಲ್ಲೆಯ ಎಲ್ಲ ಮುಖಂಡರ ವಿಶ್ವಾಸ ಪಡೆದು ಉತ್ತಮವಾಗಿ ಕೆಲಸ ನಿರ್ವಹಿಸುತ್ತೇನೆ. ಇದು ನನ್ನ ಮೊದಲ ಸಭೆ, ಮುಂದಿನ ಸಭೆಯಲ್ಲಿ ಎಲ್ಲ ಮಾಹಿತಿ ಸಂಗ್ರಹಿಸಿಕೊಂಡು, ಮುಂದಿನ ತಿಂಗಳು 11 ರಂದು ಮತ್ತೊಮ್ಮೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಭೆ ನಡೆಸುತ್ತೇನೆ ಎಂದರು.
ದಾವಣಗೆರೆ ಜಿಲ್ಲೆಯ ಬಹುಗ್ರಾಮಗಳ ಯೋಜನೆ , ನೀರಾವರಿ ಯೋಜನೆಗಳು , ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಯೋಜನೆಗಳು ಟಾಸ್ಕಪೋರ್ಸ್ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳು , ಶೌಚಾಲಯ ವ್ಯವಸ್ಥೆ , ಉದ್ಯೋಗಖಾತ್ರಿ ಯೋಜನೆ ಪ್ರಗತಿ ಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ತ್ವರಿತವಾಗಿ ಮುಗಿಸುವಂತೆ ಸೂಚನೆ ನೀಡಿದರು.
ಇದೇ ವೇಳೆ ಜಗಳೂರು ತಾಲ್ಲೂಕಿನ ಬರ ಪರಿಸ್ಥಿತಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಶಾಸಕ ಎಸ್ ವಿ ರಾಮಚಂದ್ರ ಅಸಹಾಯಕತೆ ವ್ಯಕ್ತಪಡಿಸಿದರು. ನನ್ನದು ಹಿಂದುಳಿದ ತಾಲ್ಲೂಕು ಕುಡಿಯುವ ನೀರಿನ ಬರ ನೀಗಿಸಿ ,ಗೋಶಾಲೆಗಳ ಮುಂದುವರಿಕೆ ಬಗ್ಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿ.ಎಂ ಕಾರ್ಯದರ್ಶಿ ರೇಣುಕಾಚಾರ್ಯ, ಸಂಸದ ಜಿ.ಎಂ ಸಿದ್ದೇಶ್ವರ, ಶಾಸಕರಾದ ಎಸ್.ಎ ರವೀಂದ್ರನಾಥ್, ಎಸ್.ವಿ. ರಾಮಚಂದ್ರಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ , ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಉಪಸ್ಥಿತರಿದ್ದರು.