ಡಿವಿಜಿಸುದ್ದಿ.ಕಾಂ, ಹರಿಹರ: ಕೊಲ್ಲಾಪುರ ಮೂಲದ ಕುರಿಗಾಹಿಗಳು ಮೆಲೆಬೆನ್ನೂರು ಮೂಲದ ಚಮನ್ ಸಾಬ್ (56) ಎಂಬಾತನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ.
ತಾಲೂಕಿನ ಜಿ.ಟಿ.ಕಟ್ಟೆ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕೊಲ್ಲಾಪುರ ಮೂಲದ ಕುರಿಗಾಹಿಗಳು ಪ್ರತಿ ವರ್ಷ ಹರಿಹರ ಹೊನ್ನಾಳಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಕುರಿ ಕಾಯಲು ಬರುತ್ತಿದ್ದರು. ಪ್ರತಿ ವರ್ಷವೂ ಕೂಡ ರಾತ್ರಿ ವೇಳೆ ಕುರಿ ಕಳ್ಳತನ ಯಥೇಚ್ಛವಾಗಿ ನಡೆಯುತ್ತಿತ್ತು. ಇದರಿಂದ ರೋಸಿ ಹೋಗಿದ್ದ ಕುರಿಕಾಯುವರು ಹೇಗಾದರೂ ಮಾಡಿ ಈ ಕುರಿ ಕಳ್ಳರನ್ನು ಹಿಡಿಯಲೇ ಬೇಕು ಎಂಬ ನಿರ್ಧಾರಕ್ಕೆ ಬಂದಿದ್ದರು.
ಶನಿವಾರ ತಡರಾತ್ರಿ ಚಮನ್ ಸಾಬ್ ಮತ್ತು ಆತನ 4 ಜನ ಸಹಚರರು ರಾತ್ರಿ ವೇಳೆ ಕುರಿ ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಅವರಲ್ಲಿ 4ಜನ ಪರಾರಿ ಆಗಿದ್ದು ಚಮನ್ ಸಾಬ್ ಎಂಬಾತ ಸಿಕ್ಕಿಬಿದ್ದ ಸಂದರ್ಭದಲ್ಲಿ ರೊಚ್ಚಿಗೆದ್ದ ಕುರಿಗಾಹಿಗಳು, ತನ್ನ ಬಳಿ ಇದ್ದ ಕೊಡಲಿಯಿಂದ ಆತನ ತಲೆ ಕತ್ತರಿಸಿ ಕೊಲೆ ಮಾಡಿದ್ದಾನೆ. ಬೆಳಿಗ್ಗೆ ಪೊಲೀಸ್ ಠಾಣೆಗೆ ಬಂದು ಕುರಿಗಾಹಿ ನಡೆದ ಘಟನೆಯನ್ನು ವಿವರಿಸಿ ಶರಣಾಗಿದ್ದಾನೆ.
ಚಮನ್ ಸಾಬ್ ಎಂಬಾತನ ಮೇಲೆ ಈಗಾಗಲೇ ಹಲವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನೇಕ ಸಲ ಕುರಿ ಕಳ್ಳತನದ ಆರೋಪ ಕೇಳಿ ಬಂದಿದ್ದವು. ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೆಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.