Connect with us

Dvgsuddi Kannada | online news portal | Kannada news online

ಪ್ರಾಕೃತಿಕ ವಿಷಮತೆ ಸರಿದೂಗಿಸಿ: ತರಳಬಾಳು ಶ್ರೀಗಳ ಸಲಹೆ

Home

ಪ್ರಾಕೃತಿಕ ವಿಷಮತೆ ಸರಿದೂಗಿಸಿ: ತರಳಬಾಳು ಶ್ರೀಗಳ ಸಲಹೆ

ಡಿವಿಜಿಸುದ್ದಿ.ಕಾಂ, ದಾವಣಗೆರೆ: ಬರ-ನೆರೆಯಂತಹ ಪ್ರಾಕೃತಿಕ ವಿಷಮತೆಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ರಾಜ್ಯ ರ್ಸಕಾರ ಕ್ರಮ ವಹಿಸಬೇಕಿದೆ ಎಂದು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ೨೭ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ದಾವಣಗೆರೆ ನಗರ ಹಾಗೂ ಗ್ರಾಮಾಂತರ ಶಿಷ್ಯ ಮಂಡಳಿಯಿಂದ ಭಕ್ತಿ ಸಮರ್ಪಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಜನತೆ ಸಂಕಷ್ಟಕ್ಕೀಡಾದರೆ, ಜಗಳೂರಿನಲ್ಲಿ ಬರದಿಂದ ಜನತೆ ಬಳಲಿದ್ದಾರೆ. ಈ ವೇಳೆ ನೆರೆ ಅಥವಾ ಬರ ಎಂದು ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೈ ಚಾಚದೆ, ಹರಿದು ಹೋಗುವ ನೀರನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಎಲ್ಲಿ ಅಗತ್ಯವೋ ಅಲ್ಲಿಗೆ ನೀರು ಹರಿಸಿ, ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಿ ಶಾಶ್ವತ ಪರಿಹಾರ ಕೈಗೊಂಡರೆ ಎಂದಿಗೂ ಬರ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದರು.
ಜಗಳೂರು ಹಾಗೂ ಭರಮಸಾಗರ ಏತ ನೀರಾವರಿ ಯೋಜನೆಗೆ ಹಣ ಮಂಜೂರಾಗಿದ್ದು, ನೀರಾವರಿ ಇಲಾಖೆ ಯಿಂದ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಒಂದು ವರ್ಷದಲ್ಲಿ ಆ ಭಾಗದ ಎಲ್ಲಾ ಕೆರೆಗಳಿಗೆ ನೀರು ತುಂಬುವ ದಿನಗಳನ್ನು ನೋಡಲು ಕಾಯುತ್ತಿದ್ದೇವೆ ಎಂದು ಶ್ರೀಗಳು ಹೇಳಿದರು.

tharalabalu shri davanagere akki samarpane 2

ಜಂಗಮ ಬೇಡಬಾರದು, ಭಕ್ತ ಬೇಡಿಸಿಕೊಳ್ಳಬಾರದು ಎಂದು ಬಸವಣ್ಣನವರು ಹೇಳಿದ್ದಾರೆ. ಹಿಂದೆ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹಣ ಕೇಳುವುದನ್ನು ವಸೂಲಿ ಎನ್ನಲಾಗುತ್ತಿತ್ತು. ಹಣ ಕೊಡದೆ ತಪ್ಪಿಸಿಕೊಳ್ಳುವವರನ್ನು ಬೆನ್ನತ್ತಿ ವಸೂಲಿ ಮಾಡಲಾಗುತ್ತಿತ್ತು. ಕ್ರಮೇಣ ಇದು ಬದಲಾಗಿ ಕೇಳದೇ ಇದ್ದರೂ ಭಕ್ತರೇ ಧಾರಾಳವಾಗಿ ಕಾಣಿಕೆ ಅರ್ಪಿಸುತ್ತಿರುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದು ಹರ್ಷ ವ್ಯಕ್ತಪಡಿಸಿದರು.

ನಾವು ಭೂತಪ್ಪ ಇದ್ದಂಗೆ

ನಾವು, ಭಕ್ತರು ಕೊಟ್ಟ ನಿಧಿಯನ್ನು ಕಾಯುವ ಭೂತಪ್ಪ ಇದ್ದಹಾಗೆ. ನಿಮ್ಮ ಹಣ ದುರ್ಬಳಕೆಯಾಗಲು ಬಿಡದೆ, ಜತನದಿಂದ ಕಾಪಾಡಿ ನೀವು ಯಾವ ಉದ್ದೇಶಕ್ಕೆ ಕೊಟ್ಟಿರುತ್ತೀರೋ ಅದಕ್ಕೆ ಬಳಕೆ ಮಾಡುವ ಆತ್ಮತೃಪ್ತಿ ನಮಗಿದೆ ಎಂದು ತರಳಬಾಳು ಜಗದ್ಗುರುಗಳು ಹೇಳಿದರು.

ನೀರಾವರಿ ಸಮಸ್ಯೆಗಳೇ ಹೆಚ್ಚು

ಪ್ರತಿ ಸೋಮವಾರ ಸಿರಿಗೆರೆಯಲ್ಲಿ ನಡೆಯುವ ನ್ಯಾಯ ಪೀಠದಲ್ಲಿ ಕೌಟುಂಬಿಕ ಸಮಸ್ಯೆಗಳ ಬದಲಾಗಿ ನೀರಾವರಿ ಸಮಸ್ಯೆಗಳೇ ಹೆಚ್ಚಾಗಿವೆ ಎಂದು ಶ್ರೀಗಳು ಹೇಳಿದರು.ವಾರದಲ್ಲಿ ಸೋಮವಾರ ನಮಗೆ ದೀರ್ಘವಾದ ದಿನವಾಗಿದೆ. ಅಂದು ರಾತ್ರಿ ೨ ಗಂಟೆ ನಂತರ ವಿಶ್ರಾಂತಿ ಪಡೆಯುತ್ತೇವೆ. ಆದರೆ ಸ್ವಲ್ಪವಾದರೂ ಜನರ ಕಣ್ಣೀರು ಒರೆಸಿದ ತೃಪ್ತಿ ನಮಗಿರುತ್ತದೆ ಎಂದರು.

ಒಂದು ವಾರ ನಡೆಸಲಾಗುತ್ತಿದ್ದ ಲಿಂ.ಶ್ರೀ ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಸಮಾರಂಭವನ್ನು ೧ ದಿನಕ್ಕೆ ಸೀಮಿತ ಗೊಳಿಸಲಾಗಿದೆ. ಸೆ. ೨೪ ರಂದು ನಡೆಯುವ ಕಾರ್ಯಕ್ರಮಕ್ಕೆ ಹಿಂದಿಗಿಂತಲೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ವಿಭಿನ್ನವಾಗಿ ನಡೆಸಲು ಎಲ್ಲಾ ರೀತಿಯ ತಯಾರಿಗಳು ನಡೆ ಯುತ್ತಿವೆ. ಲಿಂಗೈಕ್ಯ ಶ್ರೀಗಳು ಬದುಕಿದ್ದಾಗ ಕರೆದ ಎಲ್ಲಾ ಭಕ್ತರ ಮನೆಗೂ ಹೋಗುತ್ತಿದ್ದರು. ಈಗ ಭಕ್ತರೇ ಅವರಿರುವ ಜಾಗಕ್ಕೆ ಬಂದು ಆಶೀರ್ವಾದ ಪಡೆಯಬೇಕು ಎಂದು ಕರೆ ನೀಡಿದರು.

ಭಕ್ತಿ ಸಮರ್ಪಣೆ

ದಾವಣಗೆರ ನಗರ ಹಾಗೂ ಗ್ರಾಮೀಣ ಪ್ರದೇಶದ ಶಿಷ್ಯ ಮಂಡಳಿಯಿಂದ ೧೦೧ ಕ್ವಿಂಟಾಲ್ ಅಕ್ಕಿಯನ್ನು ಕಳುಹಿಸಿಕೊಡಲಾಯಿತು. ಗ್ರಾಮಾಂತರ ಪ್ರದೇಶಗಳಿಂದ ೬,೩೨, ೭೦೮ ರೂ.ಗಳನ್ನು ನೀಡಲಾಗಿ ದೆ ಎಂದು ಹೇಳಿದ ತರಳಬಾಳು ಶ್ರೀಗಳು, ಈ ಪಟ್ಟಿ ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದರು. ಇದೇ ವೇಳೆ ಎಸ್.ಎಸ್.ಮಲ್ಲಿಕಾರ್ಜುನ್ ಅಭಿಮಾನಿ ಬಳಗದಿಂದ ಎಂ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್ ನೇತೃತ್ವದಲ್ಲಿ ೧೦೧ ಪ್ಯಾಕೆಟ್ ಅಕ್ಕಿಯನ್ನು, ತರಳಬಾಳು ಬಡಾವಣೆ ನಾಗರೀಕರು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿ.ವಾಮದೇಪ್ಪ ಅವರ ನೇತೃತ್ವದಲ್ಲಿ ೧,೦೨,೬೧೬ ರೂ.ಗಳನ್ನು ಸಮರ್ಪಿಸಿದರು.

ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡುತ್ತಾ, ಗ್ರಾಮೀಣ ಪ್ರದೇಶದಲ್ಲಿ ಅಲ್ಲಿನ ದಾನಿಗಳಿಂದಲೇ ಹಣ ಸಂಗ್ರಹಿಸಿ, ಶಾಲಾ-ಕಾಲೇಜು ನಿರ್ಮಿಸಿ ತೋರಿಸಿದವರು ಲಿಂ.ಜಗದ್ಗುರುಗಳು. ಎಂತಹ ಮೃದು ವ್ಯಕ್ತಿಯಲ್ಲೂ ಗಟ್ಟಿತನ ತುಂಬುವ ಅವರು, ನಮ್ಮಲ್ಲೂ ಧೈರ್ಯ, ಶಿಸ್ತು ಕಲಿಸಿದರು ಎಂದು ಸ್ಮರಿಸಿದರು. ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಡಿ. ಮಹೇಶ್ವರಪ್ಪ ಮಾತನಾಡುತ್ತಾ, ಮಠದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾಲದಲ್ಲಿಯೂ ಸಮಾಜವನ್ನು ಸಂಘಟಿಸಿ, ಬಡ ಜನರಿಗೆ, ಗ್ರಾಮೀಣ ಹೆಣ್ಣುಮಕ್ಕಳಿಗೆ ಶಾಲೆ ತೆರೆದು ವಿದ್ಯಾಭ್ಯಾಸ ನೀಡಿದ ಕೀರ್ತಿ ಲಿಂ.ಶಿವಕುಮಾರ ಶ್ರೀಗಳಿಗೆ ಸಲ್ಲುತ್ತದೆ ಎಂದರು.

ಹಳೆಬೀಡಿನಲ್ಲಿ ಹುಣ್ಣಿಮೆ

tharalabalu shri davanagere akki samarpane 1

ಬರಗಾಲವಿದ್ದ ಕಾರಣ ಹಿಂದಿನ ವರ್ಷ ಹಳೆಬೀಡಿನಲ್ಲಿ ತರಳಬಾಳು ಹುಣ್ಣಿಮೆ ಆಚರಿಸಿರಲಿಲ್ಲ. ಆದರೆ ಮುಂದಿನ ವರ್ಷ ತಪ್ಪದೇ ಹಳೆಬೀಡಿನಲ್ಲಿಯೇ ನಡೆಸಲಾಗುವುದು ಎಂದು ಶ್ರೀಗಳು ಹೇಳಿದರು.

ಉದ್ಯಮಿ ಅಣಬೇರು ರಾಜಣ್ಣ ಮಾತನಾಡುತ್ತಾ, ಹಣ ಕ್ಕಿಂತ ವಿದ್ಯೆಗೆ ಹೆಚ್ಚಿನ ಒತ್ತು ನೀಡಿದ್ದ ಲಿಂ.ಶಿವಕುಮಾರ ಶ್ರೀಗಳು, ಮಠವನ್ನು ಶ್ರೀಮಂತಗೊಳಿಸದೆ ಭಕ್ತರನ್ನು ಶ್ರೀಮಂತಗೊಳಿಸಿದರು. ಕಳೆದ ೬೦ ರಿಂದ ೭೦ ವರ್ಷಗಳಲ್ಲಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಅವರು ಕಾರಣರಾಗಿದ್ದಾರೆ ಎಂದರು. ಎಪಿಎಂಸಿ ದಲ್ಲಾಲರ ಸಂಘದ ಅಧ್ಯಕ್ಷ ಜಿ.ಎಸ್. ಪರಮೇಶ್ವರಗೌಡ್ರು ಪ್ರಾಸ್ತಾವಿಕವಾಗಿ ಮಾತನಾಡಿದರು.

Continue Reading
Advertisement
You may also like...

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in Home

To Top