ಡಿವಿಜಿಸುದ್ದಿ.ಕಾಂ, ಸಿರಿಗೆರೆ: ತರಳಬಾಳು ಮಠವು ಶಿಕ್ಷಣ, ಕಲೆ ಸಾಹಿತ್ಯ, ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆ ಈ ಭಾಗದ ರೈತರ ದಿಕ್ಸೂಚಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ನಾಡಿನ ಹೆಮ್ಮೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತರಳಬಾಳು ಮಠದ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 27 ನೇ ವರ್ಷದ ಶ್ರದ್ಧಾಂಜಲಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 4 ದಶಕದಿಂದ ತರಳಬಾಳು ಶೈಕ್ಷಣಿಕ, ಸಾಂಸ್ಕೃತಿಕ, ಕಲೆ, ಸಾಹಿತ್ಯದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದರು.
ಹಿರಿಯ ಶ್ರೀಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಗ್ರಾಮೀಣ ಪ್ರದೇಶ ಮಕ್ಕಳ ಶಿಕ್ಷಕ್ಕೆ ಹೆಚ್ಚಿನ ಮಹತ್ವ ನೀಡಿದರು. ಅವರ ಆಶಯದಂತೆ ಈಗಿನ ಗುರುಗಳು ಮಠವನ್ನು ಉತ್ತುಂಗಕ್ಕೆ ತಗೆದುಕೊಂಡು ಹೋಗಿದ್ದು, ತರಳಬಾಳು ಮಠ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಮೈಲುಗಲ್ಲು ಸ್ಥಾಪಿಸಿದೆ ಎಂದು ತಿಳಿಸಿದರು.
ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಪ್ರತಿ ವಾರ ನಡೆಸಿಕೊಡುವ ನ್ಯಾಯ ಪೀಠ, ಈ ಭಾಗದ ಕೆರೆಗಳಿಗೆ ನೀರು ತುಂಬಿಸಿದ್ದು, ಪಾಂಡಿತ್ಯ, ಜನಪರ ಕಾಳಜಿಯನ್ನು ಎಲ್ಲರು ಮೆಚ್ಚುವಂತಹದು. ಈ ಮೂಲಕ ಶ್ರೀಗಳು ಈ ಭಾಗದ ರೈತರ ದಿಕ್ಸೂಚಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಮಾದರಿ ರಾಜ್ಯದ ಗುರಿ
ಈ ಬಾರಿ ಅತಿವೃಷ್ಟಿ, ಅನಾವೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿ ಒಳಗಾಗಿದೆ. ಹೀಗಾಗಿ ಈ ಬಾರಿಯ ಬಜೆಟ್ ನಲ್ಲಿ ರೈತರ ಭರಪೂರ ಯೋಜನೆ ಕೊಡಲು ಸಾಧ್ಯವಾಗುವುದಿಲ್ಲ. ಮುಂದಿನ ಬಜೆಟ್ ನಲ್ಲಿ ರೈತರ ಸಮಸ್ಯೆಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂದಿನ 3 ವರ್ಷದಲ್ಲಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ, ಕೇಂದ್ರ ಸಚಿವ ಸುರೇಶ್ ಅಂಗಡಿ, ಸಚಿವರಾದ ಜೆ.ಸಿ. ಮಾಧುಸ್ವಾಮಿ, ಬಸವರಾಜ್ ಬೊಮ್ಮಾಯಿ, ಸಿ.ಟಿ ರವಿ, ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಎಸ್. ಎ ರವೀಂದ್ರನಾಥ್, ಎಸ್. ವಿ ರಾಮಚಂದ್ರಪ್ಪ, ಮಡಾಳ್ ವಿರುಪಾಕ್ಷಪ್ಪ, ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.