ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ನೂರಾರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೇ , ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಹಕ್ಕು ಚ್ಯುತಿ ಕದನಕ್ಕೆ ತೆರೆ ಬಿದ್ದಿದೆ. ಮಂಗಳವಾರ ಹಾಡಿದ ಮಾತುಗಳಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದ ಬೆನ್ನಲ್ಲೇ ಉಭಯ ಪಕ್ಷಗಳ ನಾಯಕರ ಒಪ್ಪಿಗೆ ಮೇರೆಗೆ ಎರಡೂ ಹಕ್ಕುಚ್ಯುತಿ ಪ್ರಕರಣಗಳನ್ನು ಸ್ಪೀಕರ್ ಕೈಬಿಟ್ಟಿದ್ದಾರೆ.
ಬುಧವಾರ ಸದನಕ್ಕೆ ಗೈರಾಗಿದ್ದ ರಮೇಶ್ ಕುಮಾರ್ ಅವರು ಗುರುವಾರ ಕಲಾಪಕ್ಕೆ ಹಾಜರಾದರು. ಈ ವೇಳೆ ಮಾತನಾಡಿದ ಅವರು, ನಾನು ಸಚಿವ ಡಾ.ಸುಧಾಕರ್ ವಿರುದ್ಧ ಯಾವುದೇ ಕೆಟ್ಟ ಶಬ್ಧ ಬಳಸಿಲ್ಲ. ಇದನ್ನು ನನ್ನ ಆತ್ಮಸಾಕ್ಷಿಯಾಗಿ ಹೇಳುತ್ತಿದ್ದೇನೆ.
ಸುಳ್ಳು ಹೇಳಿ ರಾಜಕಾರಣ ಮಾಡುವವನು ನಾನಲ್ಲ. ಆ ರೀತಿ ಪದ ಬಳಕೆ ಮಾಡಿಲ್ಲ. ನನ್ನ ಮಾತು ಅವರಿಗೆ ನೋವು ಆಗಿದ್ದರೆ, ವಿಷಾದ ವ್ಯಕ್ತಪಡಿಸುತ್ತೇನೆ. ಇದರಿಂದ ನನ್ನ ವ್ಯಕ್ತಿತ್ವ ಕಡಿಮೆ ಆಗಲ್ಲ ಎಂದು ಹೇಳಿದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪರ ವಿಪಕ್ಷ ನಾಯಕ ಸಿದ್ದರಾಮಯ್ಯ ಒಂಟಿಯಾಗಿ ಮಾತನಾಡಿದರು. ಸಚಿವ ಸುಧಾಕರ್ ಪರ ಮಿತ್ರಮಂಡಳಿಯ ಸಚಿವರು ನಿಂತಿದ್ದರು.
ರಮೇಶ್ ಕುಮಾರ್ ಅವರು, ನಾನು ಅಂದು ಸ್ಪೀಕರ್ ಕುರ್ಚಿಯಲ್ಲಿ ಕುಳಿತು ಮಾತನಾಡಿದ ಮಾತಿಗೆ ಇವತ್ತು ಕೂಡ ಬದ್ಧ ಅಂತ ಹೇಳಿದರು. ಸ್ಪೀಕರ್ ಆಗಿದ್ದವರು, ಆ ಕುರ್ಚಿಯಲ್ಲಿ ಕುಳಿತು ಮಾತನಾಡಬಹುದಾ? ಅವರು ನಮ್ಮ ಬಗ್ಗೆ ಪೂರ್ವಾಗ್ರಹಪೀಡಿತರಾಗಿದ್ದರು ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಸುಧಾಕರ್ ಪ್ರಶ್ನೆ ಮಾಡಿದರು. ಇದರಿಂದಾಗಿ ಸದನದಲ್ಲಿ ಒಂದಿಷ್ಟು ಗದ್ದಲ ನಡೆಯಿತು. ಕೊನೆಯಲ್ಲಿ ರಮೇಶ್ ಕುಮಾರ್ ವಿಷಾದದಿಂದ ಹಕ್ಕುಚ್ಯುತಿ ಕೈ ಬಿಡಲಾಯಿತು.



