ಡಿವಿಜಿ ಸುದ್ದಿ, ತುಮಕೂರು: ಲಾಕ್‍ಡೌನ್ ನಡುವೆಯೂ ತುರುವೇಕೆರೆ ಶಾಸಕ ಮಸಾಲೆ ಜಯರಾಂ ಅವರ ಹುಟ್ಟು ಹಬ್ಬವನ್ನು ಆಚರಿಸಿದ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಜಯರಾಂ ಅವರ ಬೆಂಬಲಿಗರಾದ ಗುಬ್ಬಿ ತಾಲೂಕಿನ ಇಡಗೂರಿನ ರವಿ, ರಾಜೇನಹಳ್ಳಿಯ ವಸಂತಕುಮಾರ್ ಹಾಗೂ ಹೊನ್ನೇಗೌಡರ ಮೇಲೆ ಎಫ್‍ಐಆರ್ ದಾಖಲಾಗಿದೆ. ಲಾಕ್‍ಡೌನ್ ನಡುವೆ ಜನರನ್ನು ಸೇರಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಗುಂಪು ಸೇರಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಟ್ಟುಹಬ್ಬ ಆಚರಣೆ ವೇಳೆ ಸಾಮಾಜಿಕ ಅಂತರ ಕಾಪಾಡದೇ ನಿಯಮ ಉಲ್ಲಂಘಿಸಿ ಜನರ ಗುಂಪು ಸೇರಿಸಿದ್ದರು. ಶಾಸಕ ಮಸಾಲೆ ಜಯರಾಂ ಸಾಮಾಜಿಕ ಅಂತರ ಮರೆತು, ಮಾಸ್ಕ್ ಸಹ ಹಾಕಿಕೊಳ್ಳದೇ ಕೇಕ್ ಕಟ್ ಮಾಡಿದ್ದರು. ಅಷ್ಟೇ ಅಲ್ಲದೆ ಹುಟ್ಟುಹಬ್ಬ ನಿಮಿತ್ತ ಜನರಿಗೆ ಬಿರಿಯಾನಿ ಊಟ ಸಹ ಹಾಕಿಸಿದ್ದರು. ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಜನರು ಸೇರಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆ ಆಗಿದ್ದರೂ ಹುಟ್ಟುಹಬ್ಬ ಆಚರಿಸಿಕೊಂಡ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.