ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಕೋವಿಡ್ 19 ಪ್ರಕರಣ ಹಿನ್ನೆಲೆ ತಂಬಾಕು ಉತ್ಪನ್ನಗಳ ಬಳಕೆ ನಿಷೇಧಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ.
ಹೊಗೆರಹಿತ ತಂಬಾಕು ಪದಾರ್ಥಗಳಾದ ಗುಟ್ಕಾ, ಜರ್ದಾ, ಖೈನಿ, ಪಾನ್ ಮಸಾಲ ಮತ್ತು ಅಡಕೆ ಜಗಿಯುವುದು, ಎಲ್ಲೆಂದರಲ್ಲಿ ಉಗುಳುವುದರಿಂದ ಕೋವಿಡ್ ಸೋಂಕು ಶೀಘ್ರವಾಗಿ ವ್ಯಾಪಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ತಂಬಾಕು ಉತ್ಪನ್ನ ಬಳಕೆಗೆ ನಿರ್ಬಂಧ ಹೇರುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕ ಪದಾರ್ಥಗಳನ್ನು ಸೇವಿಸಬಾರದು ಮತ್ತು ಉಗುಳಬಾರದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಜನರಲ್ಲಿ ಮನವಿ ಮಾಡಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ತಂಬಾಕು ವಿರೋಧಿ ಕಾನೂನು ಮಾತ್ರವಲ್ಲದೇ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ–1897, ವಿಪತ್ತು ನಿರ್ವಹಣಾ ಕಾಯ್ದೆ–2005 ಮತ್ತು ಭಾರತೀಯ ದಂಡ ಸಂಹಿತೆ–1860 ರ ಅಡಿಯಲ್ಲೂ ಪ್ರಕರಣ ದಾಖಲಿಸಿ ಎಂದು ರಾಜ್ಯಗಳಿಗೆ ಸೂಚಿಸಿದೆ.