ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ ಲಾಕ್ ಡೌನ್ ನಿಂದ ಬಂದ್ ಆಗಿದ್ದ ದೇವಸ್ಥಾನಗಳಲ್ಲಿ ಮೇ 26 ರಿಂದ ಆನ್‍ಲೈನ್ ಸೇವೆ ಪ್ರಾರಂಭ ಆಗಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಆನ್‍ಲೈನ್‍ನಲ್ಲಿ ಭಕ್ತರು ದೇವಸ್ಥಾನಗಳಿಗೆ ಹಣ ಪಾವತಿ ಮಾಡಿ ಪೂಜೆ ಮಾಡಿಸಲು ಅವಕಾಶ ನೀಡಲಾಗುತ್ತದೆ. 15ರಿಂದ 20 ಸೇವೆಗಳಿಗೆ ಅವಕಾಶ ಕೊಡಲಾಗುತ್ತದೆ. ಆನ್‍ಲೈನ್‍ನಲ್ಲಿ ಭಕ್ತರು ಹಣ ಪಾವತಿ ಮಾಡಬೇಕು, ಅವರ ಹೆಸರಿನಲ್ಲಿ ಪೂಜೆ ಮಾಡಿ ಪ್ರಸಾದ ಭಕ್ತರ ಮನೆಗೇ ಕಳುಹಿಸುತ್ತೇವೆ. ದೇವಾಲಯದ ಒಳಗೆ ಯಾರನ್ನು ಬಿಡುವುದಿಲ್ಲ. ಹಣ ಪಾವತಿಸಿದ ಭಕ್ತರು ಹೇಳಿದವರ ಹೆಸರಲ್ಲಿ ಪೂಜೆ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರಥಮ ಬಾರಿಗೆ 50 ದೇವಾಲಯದಲ್ಲಿ ಆನ್‍ಲೈನ್ ಸೇವೆಗೆ ಅವಕಾಶ ನೀಡಲಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾ ಪರಮೇಶ್ವರಿ, ಮೈಸೂರು ಚಾಮುಂಡೇಶ್ವರಿ, ಬನಶಂಕರಿ ದೇವಾಲಯ, ನಂಜನಗೂಡು ನಂಜುಂಡೇಶ್ವರ ದೇವಲಯ ಸೇರಿ ಒಟ್ಟು 50 ದೇವಾಲಯಗಳಲ್ಲಿ ಆನ್‍ಲೈನ್ ಸೇವೆ ಪ್ರಾರಂಭವಾಗುತ್ತದೆ. ಸಿಎಂ ಒಪ್ಪಿಗೆ ಕೊಟ್ಟ ಕೂಡಲೇ ಆನ್‍ಲೈನ್ ಸೇವೆ ಪ್ರಾರಂಭ ಮಾಡ್ತೀವಿ ಎಂದು ಸಚಿವರು ತಿಳಿಸಿದರು.



