ಡಿವಿಜಿ ಸುದ್ದಿ, ಸಿರಿಗೆರೆ: ಉತ್ತರ ಕರ್ನಾಟದಲ್ಲಿ ಸುರಿದ ಮಹಾ ಮಳೆಗೆ ನೆರೆಪೀಡಿತ 1 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದ್ದ ತರಳಬಾಳು ಬೃಹನ್ಮಠಕ್ಕೆ ಬೆಳಗಾವಿ ಜಿಲ್ಲೆಯಿಂದ 195 ಮಕ್ಕಳು ಆಗಮಿಸಿದ್ದರು. ಮಕ್ಕಳನ್ನು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಅವರು ಸ್ವಾಗತಿಸಿದರು..
ಬೆಳಗಾವಿ ಜಿಲ್ಲೆಯ ಗೋ ಕಾಕ್ ತಾಲ್ಲೂಕಿನ ಬಳೋ ಬಳ, ಧವಳೇಶ್ವರ, ಪಿಜಿ ಹುಣಸೇಹಾಳು ಹಾಗೂ ಬೀರನಗಡ್ಡೆ ಗ್ರಾಮಗಳಿಂದ ಒಟ್ಟು 195 ವಿದ್ಯಾರ್ಥಿಗಳು ಮತ್ತು 180 ಜನ ಪೋಷಕರು ಭಾನುವಾರ ಸಿರಿಗೆರೆಯ ತರಳಬಾಳು ಮಠಕ್ಕೆ ಆಗಮಿಸಿದ್ದರು.
ಮಕ್ಕಳನ್ನು ಮಠಕ್ಕೆ ಸ್ವಾಗತಿಸಿದ ನಂತರ ಮಾತನಾಡಿದ ಶ್ರೀಗಳು, ದೂರದ ಊರಿನಿಂದ ಬಂದ ನಿಮ್ಮೊಂದಿಗೆ ನಾವಿದ್ದೇವೆ. ತಂದೆ-ತಾಯಿಗಳನ್ನು ಅಗಲಿ ದೂರವಿರುವ ಚಿಂತೆಯನ್ನು ಬಿಟ್ಟುಬಿಡಿ. ಮಾನಸಿಕ ಖಿನ್ನತೆಗೆ ಒಳಗಾಗದೆ ನಿಮ್ಮ ಉಜ್ವಲ ಭವಿಷ್ಯದ ಕಡೆ ಗಮನಹರಿಸಿ ಎಂದರು.
ಎಲ್ಲಾ ಸಂಪತ್ತಿಗಿಂತಲೂ ಮಿಗಿಲಾದ ಸಂತಪತ್ತು ಶಿಕ್ಷಣ. ಹೀಗಾಗಿ ನೆರೆಯಿಂದ ಮನೆ ಮಠ ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಶಾಶ್ವತ ಪರಿಹಾರ ನೀಡುವ ಕೆಲಸವಾಗಬೇಕಿದೆ. ಈಗಾಗಲೇ ಮೂರು ಜಿಲ್ಲೆಗಳಿಗೆ ಭೇಟಿ ನೀಡಿದ್ದೇವೆ. ಅಲ್ಲಿನ ಪರಿಸ್ಥಿತಿ ನೋಡಿದರೆ, ಮಕ್ಕಳ ಶಿಕ್ಷಣದ ಬಗ್ಗೆ ಯೋಚನೆಯನ್ನೂ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಲ್ಲಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿದರು. ಮಕ್ಕಳ ಜೊತೆಗೆ ಬಂದಿದ್ದ ಪೋಷಕರಿಗೂ ಹೊಸ ಬಟ್ಟೆಗಳನ್ನು ನೀಡಿದರು. ಮಕ್ಕಳನ್ನು ಕರೆತಂದಿರುವುದ ಗೋ ಕಾಕ್ ತಾಲ್ಲೂಕಿನ ಸಾಮಾಜಿಕ ಕಾರ್ಯಕರ್ತ ವಿನಯ್ ನಾಯಕ್ ಮತ್ತು ನಾರಾಯಣ್ ಚೆನ್ನಾಳ್ ಅವರನ್ನು ಶ್ರೀಗಳು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯಆಡಳಿತಾ ಧಿಕಾರಿ ಎಸ್.ಬಿ.ರಂಗನಾಥ್ ವಿಶೇಷಾಧಿಕಾರಿ ಡಾ. ಹೆಚ್.ವಿ.ವಾಮದೇವಪ್ಪ, ಪ್ರಾಚಾರ್ಯ ಡಿ.ಎಂ.ನಾಗರಾಜು, ಐ ಜಿ.ಚಂದ್ರಶೇಖರಯ್ಯ, ಮುಖ್ಯ ಶಿಕ್ಷಕ ಜೆ.ಡಿ.ಬಸವರಾಜು, ಸೋಮಶೇಖರ್, ಎಂ.ಎನ ಶಾಂತಾ ಮತ್ತು ಇತರರು ಭಾಗವಹಿಸಿದ್ದರು.