ಡಿವಿಜಿ ಸುದ್ದಿ, ಹಾಸನ: ಸಿರಿಗೆರೆಯ ತರಳಬಾಳು ಬೃಹನ್ಮಠದ ‘ತರಳಬಾಳು ಹುಣ್ಣಿಮೆ ಮಹೋತ್ಸವ-2020 ‘ ಫೆ. 1ರಿಂದ 9 ವರೆಗೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೆಬೀಡಿನಲ್ಲಿ ನಡೆಯಲಿದೆ.
ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಫೆ.1 ರಿಂದ 9ರವರೆಗೆ ಜರುಗಲಿದೆ. ಪ್ರತಿದಿನ ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭಗೊಳಲಿದೆ. ನಾಡಿನ ಸರ್ವ ಧರ್ಮ ಭಾವೈಕ್ಯ ಸಂಗಮದಂತೆ ನಡೆದುಕೊಂಡು ಬಂದಿರುವ `ತರಳಬಾಳು ಹುಣ್ಣಿಮೆ’ ಮಹೋತ್ಸವು ಕಳೆದ 69 ವರ್ಷದಿಂದ ರಾಜ್ಯದ ವಿವಿಧ ಭಾಗದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ವರ್ಷವೇ ಹಳಬೀಡಿನಲ್ಲಿ ಮಹೋತ್ಸವ ನಡೆಯಬೇಕಿತ್ತು. ಆದರೆ, ರಾಜ್ಯದಲ್ಲಿ ಬರಗಾರಲವಿದ್ದ ಕಾರಣ ಹುಣ್ಣಿಮೆ ಮಹೋತ್ಸವನ್ನು ಮುಂದೂಡಲಾಗಿತ್ತು.
ಪ್ರತಿ ದಿನ ಕಲೆ, ಸಾಹಿತ್ಯ,ವಿಜ್ಞಾನ, ರಾಜಕೀಯ, ಆರ್ಥಿಕತೆ, ವಚನ ಸಾಹಿತ್ಯ,ಇತಿಹಾಸ ಶಿಕ್ಷಣ, ಆರೋಗ್ಯ, ಸಮಕಾಲೀನ ಚಿಂತನೆ.. ಹೀಗೆ ವಿವಿಧ ವಿಷಯಗಳ ಕುರಿತು ವಿಷಯ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಫೆ.1 ರಂದು ಮಹೋತ್ಸವ ಉದ್ಘಾಟನೆಯಾಗಲಿದ್ದು, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ, ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ತರಳಬಾಳು ಶಾಖಾ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಕಂದಾಯ ಸಚಿವ ಆರ್. ಅಶೋಕ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ್, ಶಾಸಕ ಎಚ್.ಕೆ. ಕುಮಾರಸ್ವಾಮಿ, ಎಂಎಲ್ ಸಿ ಧರ್ಮೇಗೌಡ ಭಾಗಿಯಾಗಲಿದ್ದಾರೆ.
ಫೆ.2 ರಂದು ಸತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ,ರಂಗಪುರ ಸುಕ್ಷೇತ್ರದ ಗುರುಪರದೇಶಿಕೇಂದ್ರ ಸ್ವಾಮೀಜಿ ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ , ಸಂಸದೆ , ಶೋಭಾ ಕರಾಂದ್ಲಾಜೆ, ಸಚಿವ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್. ಆರ್. ಪಾಟೀಲ್, ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಲಿದ್ದಾರೆ.
ಫೆ. 3 ರಂದು ಪುಷ್ಬಗಿರಿ ಮಹಾ ಸಂಸ್ಥಾನದ ಶ್ರೀ ಡಾ. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಅರಕಲಗೂಡು ಮಠದ ಶ್ರೀ ಪ.ಬ್ರ. ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಸಿ.ಟಿ. ರವಿ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್ .ಷಡಕ್ಷರಿ ಭಾಗಿಯಾಗಲಿದ್ದಾರೆ.
ಫೆ.4 ರಂದು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ , ಕಡೂರಿನ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ವಿ. ಸೋಮಣ್ಣ, ಬೆಂಗಳೂರು ದಕ್ಷಿಣ ವಿಭಾಗದ ಜಿಲ್ಲಾ ರಕ್ಷಣಾಧಿಕಾರಿ ರವಿ ಡಿ. ಚನ್ನಣ್ಣನವರ್, ದಾವಣಗೆರೆ ವಿವಿ ಕುಲಪತಿ ವಿ.ಎಸ್. ಶರಣಪ್ಪ ಹಲಸೆ , ಕಾವೇರಿ ನೀರವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಭಾಗಿಯಾಗಲಿದ್ದಾರೆ.
ಫೆ. 5 ರಂದು ಹುಬ್ಬಳಿಯ ಮೂರು ಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ, ಸಂತ ಆಂತೋನಿ ಚರ್ಚೆ ಧರ್ಮಗುರು ರೊನಾಲ್ಡ್ ಕಡೋಜಾ ದಿವ್ಯ ಸಾನಿಧ್ಯ ವಹಿಸಲಿದ್ದು, ಸಚಿವ ಸಿ.ಸಿ ಪಾಟೀಲ್, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ,ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ್ಯಸ್ವಾಮಿ, ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ , ಹೈಕೋರ್ಟ್ ನಿ. ನ್ಯಾಯಮೂರ್ತಿ ಕೆ.ಎಲ್ .ಮಂಜುನಾಥ್, ಮಾಜಿ ಸಚಿವ ಎಚ್. ಆಂಜನೇಯ ಭಾಗವಹಿಸಲಿದ್ದಾರೆ.
ಫೆ. 6 ರಂದು ಶಿವಮೊಗ್ಗ ಮುರುಘಾ ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ, ಝೈನ್ ಅಕಾಡಮಿ ನಿರ್ದೇಶಕ ಮೌಲನ್ ಮಹಮದ್ ಅನ್ವರ್ ಅಸಾದಿ ಸಾನಿಧ್ಯವಹಿಸಲಿದ್ದು, ಸಚಿವ ಜೆ.ಸಿ. ಮಾಧುಸ್ವಾಮಿ, ಸಚಿವ ಬಿ.ಶ್ರೀರಾಮುಲು, ಸಚಿವೆ ಶಶಿಕಲಾ ಜೊಲ್ಲೆ ಭಾಗಿಯಾಗಲಿದ್ದಾರೆ.
ಫೆ. 7 ರಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು , ಚಿತ್ರದುರ್ಗದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಸಚಿವ ಜಗದೀಶ್ ಶೆಟ್ಟರು, ಮಾಜಿ ಸಿಎಂ ಕುಮಾರಸ್ವಾಮಿ, ಕುವೆಂಪು ವಿವಿ ಕುಲಪತಿ ಡಾ.ಬಿ.ಪಿ. ವೀರಭದ್ರಪ್ಪ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಎಂಎಲ್ ಸಿ ಭೋಜೇಗೌಡ ಭಾಗಿಯಾಗಲಿದ್ದಾರೆ.
ಫೆ. 8 ರಂದು ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಪಂಚಮಸಾಲಿ ಮಠದ ವಚನಾಂದ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಡಿಸಿಎಂ ಗೋವಿಂದ್ ಕಾರಜೋಳ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಚಿವ ಕೋಟಾ ಶ್ರೀನಿವಾಸ್ ಪೂಜಾರಿ, ನಿ. ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್, ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವ ಬಿ. ಶಿವರಾಂ ಭಾಗಿಯಾಗಲಿದ್ದಾರೆ.
ಫೆ. 9 ರಂದ ಕೊನೆಯ ದಿನ ತರಳಬಾಳು ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಸದಾನಂದಗೌಡ, ಸಂಸದ ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ, ಶಾಸಕ ಎಸ್. ಎ ರವೀಂದ್ರನಾಥ್, ಶಾಸಕ ಬಿ.ಸಿ ಪಾಟೀಲ್ ಭಾಗಿಯಾಗಲಿದ್ದಾರೆ.
ಬೆಳಗ್ಗೆ 7 ರಿಂದ 8.30 ವರೆಗೆ ವಿವಿಧ ಶಾಲಾ ಮಕ್ಕಳಿಂದ ಪ್ರಭಾತ್ಫೇರಿ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಆರ್ .ಗಿರೀಶ್ ಧ್ವಜಾರೋಹಣ ನೆರವೇರಿಸಲಿದ್ದು , ದಾವಣಗೆರೆಯ ಅನುಭವ ಮಂಟಪ ಶಾಲಾ ಮಕ್ಕಳಿಂದ ವಿಶೇಷ ಕವಾಯತು ನಡೆಯಲಿದೆ. ಬೆಳಗ್ಗೆ 10 ರಿಂದ 1 ಗಂಟೆ ವರೆಗೆ ತರಳಬಾಳು ಹುಣ್ಣಿಮೆ ಕ್ರೀಡಾಮೇಳ ನಡೆಯಲಿದೆ. ಮಧ್ಯಾಹ್ನ 2.30 ರಿಂದ ಸಂಜೆ 5 ಗಂಟೆ ವರೆಗೆ ವಿಶೇಷ ವಾಹನದಲ್ಲಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದೆ.