ಡಿವಿಜಿ ಸುದ್ದಿ, ಹಳೇಬೀಡು: ನೀರಿನ ಸದ್ಬಳಕೆ, ಸಿರಿಧಾನ್ಯಗಳ ಚಕ್ರ, ವೈವಿಧ್ಯಮಯ ಹೂವು, ತರಕಾರಿಗಳ ಪ್ರದರ್ಶನ ಮಳಿಗೆಯಿಂದ ತರಳಬಾಳು ಹುಣ್ಣಿಮೆಯ ಮೆರಗು ಇನ್ನಷ್ಟು ಹೆಚ್ಚಿದೆ.
ಈ ಬಾರಿಯ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ತೋಟಗಾರಿಕೆ ಇಲಾಖೆಯ ವೈವಿಧ್ಯಮಯ ಹೂವು, ತರಕಾರಿ ವಸ್ತುಪ್ರದರ್ಶನ, ಕೃಷಿ ಇಲಾಖೆಯ ನೀರಿನ ಸದ್ಬಳಕೆಯ ಮಾದರಿ, ಸಿರಿಧಾನ್ಯಗಳ ಚಕ್ರವು ನೋಡುಗರನ್ನು ಆಕರ್ಷಿಸುವಂತಿದ್ದವು. ವಸ್ತು ಪ್ರದರ್ಶನದ ಕೃಷಿ ಮಳಿಗೆಗಳು ರೈತರು ಹಾಗೂ ಕೃಷಿ ಆಧಾರಿತ ಉದ್ದಿಮೆದಾರರಿಗೆ ಮಾಹಿತಿ ನೀಡುತ್ತಿದ್ದವು.

ಪ್ಲಾಸ್ಟಿಕ್ ಹಾಳೆಯನ್ನು ಹಾಸಿ ಹನಿ ನೀರಾವರಿ ಪದ್ಧತಿ ಅಳವಡಿಸುವುದರಿಂದ ಸಮರ್ಪಕವಾಗಿ ಗಿಡದ ಬೇರಿಗೆ ನೀರು ಇಳಿಯುತ್ತದೆ. ಗಿಡಗಳು ಆರೋಗ್ಯಕರವಾಗಿ ಬೆಳೆಯುತ್ತವೆ ಎಂಬುದನ್ನು ಪ್ರದರ್ಶನದಲ್ಲಿ ತೋರಿಸಲಾಗುತ್ತಿದೆ. ಪಾಲಿಹೌಸ್‌ನಲ್ಲಿ ನರ್ಸರಿ ಹಾಗೂ ಬೆಳೆ ಮಾಡುವ ಮಾದರಿ ರೈತರನ್ನು ಗಮನ ಸೆಳೆಯುತ್ತಿದೆ. ಹೂವಿನ ಗಿಡಗಳಾದ ಸಾಲ್‌ವಿಯಾ, ಡಿಯಾಂಚಸ್, ಮ್ಯಾರಿಗೊಂಡ, ವಿಂಕಾ ರೋಸಿಯಾ, ಏರ್‌ಬೆನ್, ಝಿನಿಯಾ ಮೊದಲಾದ ಬಣ್ಣದಿಂದ ಕಂಗೊಳಿಸಿ ಪುಷ್ಪಲೋಕ ಆನಾವರಣಗೊಳಿಸಿತ್ತು.
ಕೃಷಿ ವಸ್ತುಪ್ರದರ್ಶನದಲ್ಲಿ ಕೆರೆ, ಕಟ್ಟೆ, ಬಾವಿಯಿಂದ ಚೆಕ್ ಡ್ಯಾಂ, ಕೃಷಿಹೊಂಡ, ಗೋವಿನಕಟ್ಟೆ, ವಿವಿಧ ರೀತಿಯ ತಡೆ ಅಣೆಗಳ ಮಾದರಿ ರೂಪಿಸಲಾಗಿದ್ದು, ರೈತರು ಅಲ್ಲಿ ನಿಂತು ಮಾಹಿತಿ ಪಡೆದರು. ಸಿರಿಧಾನ್ಯ ಚಕ್ರದಲ್ಲಿ ಜೋಡಿಸಿ ಅವುಗಳ ಮಹತ್ವವನ್ನು ತಿಳಿಸುತ್ತಿರುವ ಪ್ರದರ್ಶನ ಸಮಗ್ರ ಕೃಷಿಯ ಉಪಯೋಗವನ್ನು ತಿಳಿಸುವಂತಿದೆ. ವಿವಿಧ ಪ್ರದರ್ಶನಗಳನ್ನು ವೀಕ್ಷಿಸಿದ ಜನರು ಕೃಷಿ, ತೋಟಗಾರಿಕೆ ಪ್ರದರ್ಶನದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಸ್ತು ಪ್ರದರ್ಶನಕ್ಕೆ ರೈತರು ಮಾತ್ರವಲ್ಲದೆ ವಿದ್ಯಾರ್ಥಿಗಳು ಬಂದು ತೋಟಗಾರಿಕೆ ಕೃಷಿ ಬೆಳೆಯ ಮಾಹಿತಿ ಪಡೆಯುತ್ತಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿ ಅನ್ನಾರ್ ಅಹಮದ್.

ಸಹಾಯಕ ತೋಟಗಾರಿಕಾ ನಿರ್ದೇಶಕಿ ಸೀಮಾ, ತೋಟಗಾರಿಕೆ ಅಧಿಕಾರಿ ಅನ್ಸರ್ ಅಹಮದ್ ಕೃಷಿ ಅಧಿಕಾರಿಗಳಾದ ಪವಿತ್ರಾ, ಸಿದ್ದಪ್ಪ ಕಟ್ಟೀಮನಿ ಸ್ಥಳದಲ್ಲಿ ಮಳಿಗೆಗಳ ನಿರ್ವಹಣೆಯೊಂದಿಗೆ ರೈತರಿಗೆ ಮಾಹಿತಿ ನೀಡಿದರು.



