ಡಿವಿಜಿಸುದ್ದಿ, ಹಳೇಬೀಡು: ಮಹಾ ಭಾರತದಲ್ಲಿ ಕುರುಕ್ಷೇತ್ರವೇ ಒಂದು ಧರ್ಮವಾಗಿತ್ತು. ಆದರೆ, ಈಗ ಧರ್ಮವೇ ಕುರುಕ್ಷೇತ್ರವಾಗಿದ್ದು ಧರ್ಮ, ಧರ್ಮವಾಗಿ ಉಳಿದಿಲ್ಲ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ತರಳಬಾಳು ಹುಣ್ಣಿಮೆ ಮಹೋತ್ಸವ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯ ಯಾವುದೇ ಕೆಲಸ ಮಾಡುವಾಗ ಸಮಾಜ ಭಯ, ಕಾನೂನು ಭಯ ಹಾಗೂ ಆತ್ಮ ಭಯ ಇರಬೇಕು. ಮೊದಲ ಎರಡು ಭಯಕ್ಕಿಂತ ಆತ್ಮ ಭಯ ಶ್ರೇಷ್ಠ. ಏಕೆಂದರೆ ಮನುಷ್ಯ ಎಲ್ಲಾ ಭಯದಿಂದ ತಪ್ಪಿಸಿಕೊಳ್ಳಬಹುದು. ಆದರೆ, ಆತ್ಮ ಭಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಧರ್ಮ ಭಯವು ಆತ್ಮ ಭಯವಿದ್ದಂತೆ. ಸದಾ ನಮ್ಮನ್ನು ಎಚ್ಚರಗೊಳಿಸುವಂತಿರಬೇಕು. ಈಗ ಧರ್ಮ ಧರ್ಮವಾಗಿ ಉಳಿದಿಲ್ಲ. ಮಹಾ ಭಾರತದಲ್ಲಿ ಕುರು ಕ್ಷೇತ್ರವೇ ಒಂದು ಧರ್ಮವಾಗಿತ್ತು. ಆದರೆ, ಈಗ ಧರ್ಮವೇ ಕುರುಕ್ಷೇತ್ರವಾಗಿದೆ ಎಂದರು.
ಧರ್ಮವೆಂದರೆ ಪೂಜೆ, ಪುನಸ್ಕಾರಗಳಲ್ಲ. ಧರ್ಮವೆಂದರೆ ಸತ್ಯಶೋಧನೆ, ಶುದ್ಧ ನಡೆ-ನುಡಿಯೇ ನಿಜವಾದ ಧರ್ಮ. ಧರ್ಮವನ್ನು ಜಾತಿ ಸೂಚಕವಾಗಿ ಎಲ್ಲಿಯೂ ಬಳಸಲಾಗಿಲ್ಲ. ಹೀಗಾಗಿ ಧರ್ಮ ಶಬ್ಧದ ಅರ್ಥ ಕಷ್ಟ. ಇನ್ನು ಕಾನೂನು ಧರ್ಮಕ್ಕಿಂತ ಭಿನ್ನವಾಗಿದೆ. ಧರ್ಮದ ವ್ಯಾಪ್ತಿ ಜಾಸ್ತಿ. ಕಾನೂನು ಬೇರೆ ಬೇರೆ ದೇಶಕ್ಕೆ ಭಿನ್ನವಾಗಿರುತ್ತದೆ. ಆದರೆ, ಧರ್ಮ ಎಲ್ಲಾ ದೇಶದಲ್ಲಿಯೂ ಒಂದೇ ಆಗಿರುತ್ತದೆ ಎಂದರು.
ತರಳಬಾಳು ಹುಣ್ಣಿಮೆಯು ಮೊದಲ ಸಲ ಜಗಳೂರಿನಲ್ಲಿ ನಡೆದಿತ್ತು. ಆದಾದ ಬಳಿಕ ಹಳೇಬೀಡಿನಲ್ಲಿ ನಡೆದಿತ್ತು. ಇದೀಗ 5 ದಶಕದ ನಂತರ ಹಳೇಬೀಡಿನಲ್ಲಿ ತರಳಬಾಳು ಹುಣ್ಣಿಮೆ ನಡೆಯುತ್ತಿದೆ. ಹಳೇಬೀಡು ಒಂದು ಕಾಲದಲ್ಲಿ ಹೊಯ್ಸಳರ ರಾಜಧಾನಿಯಾಗಿತ್ತು. ಕರ್ನಾಟಕದ ರಾಜ್ಯದಲ್ಲಿ ಕಲೆಯಲ್ಲಿ ಇಡೀ ಜಗತ್ತಿಗೆ ಆರ್ಕಷಿಸುವ ಶಕ್ತಿ ಈ ಹಳೇಬೀಡಿಗೆ ಇದೆ ಎಂದರು.
ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾವು ಮತ್ತೆ ಕಲ್ಯಾಣ ಕಾರ್ಯಕ್ರಮ ಮಾಡಿದಾಗ ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಮಾಡಬೇಕು ಎಂಬ ಆಶಯ ವ್ಯಕ್ತಪಡಿಸಿದ್ದೇವು. ಅದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದರು. ಅದೇ ರೀತಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ ಹಣ ಮಂಜೂರು ಮಾಡಬೇಕು ಎಂದು ಆಗ್ರಹಿದ್ದಾಗ ಮುಖ್ಯಮಂತ್ರಿಗಳು ಕೂಡಲೇ 50 ಕೋಟಿ ಹಣ ಬಿಡುಗಡೆ ಮಾಡಿದರು. ಹಣ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ಇದಲ್ಲದೇ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕದಿಂದ ಅನುಭವಮಂಟಪದ ಸ್ತಬ್ಧಚಿತ್ರವನ್ನು ನಮ್ಮ ಮಠದ ಕಲಾವಿದರು ನಿರ್ಮಿಸಿದ್ದು ಎಂದು ಹೇಳಿಕೊಳ‍್ಳಲು ಹೆಮ್ಮೆಯಾಗುತ್ತದೆ ಎಂದರು ತಿಳಿಸಿದರು.
ಶ್ರವಣಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಹೊಯ್ಸಳರ ಕಾಲದಲ್ಲಿ ಪ್ರತಿಯೊಂದು ಊರಿಗೆ ಕೆರೆ-ಕಟ್ಟೆ, ದೇವಸ್ಥಾನ ನಿರ್ಮಿಸಿದ್ದರು. ಈ ಮೂಲಕ ಸ್ಥಳೀಯರಿಗೆ ಉದ್ಯೋಗ ಸೃಷ್ಠಿ ಆದ್ಯತೆ ನೀಡಿದ್ದರು. ಇದು ಅರ್ಥಿಕ ಸಂಶೋಧನೆಯಿಂದ ದೃಢಪಟ್ಟದೆ. ಹೀಗಾಗಿ ಇಂದಿನ ಸರ್ಕಾರಗಳು ರಾಜ್ಯದ ಜನತೆಗೆ ಉದ್ಯೋಗ ಸೃಷ್ಠಿಗೆ ಆದ್ಯತೆ ನೀಡಬೇಕು ಎಂದರು. ಇನ್ನು ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ನಾವು ಭಾಗವಹಿಸಿದ್ದು ತುಂಬಾ ಸಂತೋಷವಾಗಿದೆ. ಸಾರ್ವಜನಿಕರು ಕೂಡ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ತಮ್ಮನ್ನು ತಾವು ತಿದ್ದಿಕೊಳ್ಳಲು ಸಹಕಾರಿಯಾಗಲಿದೆ. ಎಲ್ಲಾ ಧರ್ಮದ ಸಾರ ತಿಳಿಯಿರಿ. ಅದರಲ್ಲಿ ಒಳ್ಳೆತನವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.