ಡಿವಿಜಿಸುದ್ದಿ.ಕಾಂ, ಹರಿಹರ: ಯುವಜನತೆ ಮೊಬೈಲ್ ಮತ್ತು ಟಿವಿ ಬಳಕೆಯಿಂದ ಹೊರಬಂದು ಮನಸ್ಸಿಗೆ ಮುದ ನೀಡುವ ಪುರಾತನ ಗಮಕ ಕಲೆ ಆಲಿಸಿ ಎಂದು ಹಿರಿಯ ಸಾಹಿತಿ ಲಲಿತಮ್ಮ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಗರದ ಎಸ್.ಜೆ.ವಿ.ಪಿ.ಕಾಲೇಜಿನ ಸಭಾಂಗಣದಲ್ಲಿ ಹರಿಹರದ ಶ್ರೀ ಲಕ್ಷ್ಮೀಶ ಕಲಾ ಸಂಘ, ಸಾಹಿತ್ಯ ಸಂಗಮ, ಚಿಂತನ ಪ್ರತಿಷ್ಠಾನ ಮತ್ತು ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಗಮಕ ಸಂಭ್ರಮ, ಭಾವವಿಸ್ಮಯ ಹಾಗೂ ಚಿಣ್ಣರ ಕಲರವ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುವಜನತೆ ಕೇವಲ ಮೊಬೈಲ್ ಮತ್ತು ಟಿವಿ ಹಾವಳಿಗೆ ಬಲಿಯಾಗಿದ್ದಾರೆ. ಇದರಿಂದ ಹೊರಬಂದು ಇಂತಹ ಮನಸ್ಸಿಗೆ ಉಲ್ಲಾಸ ನೀಡುವಂತಹ ಸಂಗೀತ, ಗಮಕ ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಕಾಗಿದೆ. ಇದರಿಂದ ಮನಸು ಅರಳುತ್ತದೆ, ಈ ಸಂಘಟನೆಗಳು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಇಂತಹ ಅಪರೂಪದ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಗಮಕ ಸಂಭ್ರಮ ಕಾರ್ಯಕ್ರಮದಲ್ಲಿ ಮತ್ತೂರಿನ ಎಂ.ಆರ್.ಕೇಶವಮೂರ್ತಿ ರಾಮಾಯಣದ ಪ್ರಸಂಗ ಕುರಿತು ಗಮಕ ವಾಚಿಸಿದರು. ಮತ್ತೂರಿನ ಎಂ.ಆರ್.ರಾಮಮೂರ್ತಿ ಅವರು ವ್ಯಾಖ್ಯಾನಿಸಿದರು. ವಿ.ಬಿ.ಕೊಟ್ರೇಶಪ್ಪ, ಡಿ.ಎಂ.ಮಂಜುನಾಥಯ್ಯ, ಬಿ.ಬಿ.ರೇವಣನಾಯ್ಕ , ಚಂದ್ರಲಾ ನಾಯಕ್, ಸುಬ್ರಹ್ಮಣ್ಯ ನಾಡಿಗೇರ್, ಅಕ್ಷರ ದಾಸೋಹ ಇಲಾಖೆಯ ಅಧಿಕಾರಿ ರಾಮಕೃಷ್ಣಪ್ಪ, ಸುಜಾತಾ ಗೋಪಿನಾಥ್ ಮತ್ತಿತರರು ಉಪಸ್ಥಿತರಿದ್ದರು.



