ಡಿವಿಜಿ ಸುದ್ದಿ, ಶಿವಮೊಗ್ಗ: ಸೋಮವಾರದಿಂದ ರಾಜ್ಯದ ಬಹುತೇಕ ದೇವಾಲಯಗಳು ಓಪನ್ ಆಗಲಿವೆ. ರಾಜ್ಯ ಸರ್ಕಾರ ದೇವಸ್ಥಾನ ತೆರೆಯಲು ಅವಕಾಶ ಕೊಟ್ಟ ಹಿನ್ನೆಲೆ , ಎಲ್ಲ ದೇವಸ್ಥಾನಗಳು ಕೂಡ ಸಲಕ ಸಿದ್ಧತೆ ಮಾಡಿಕೊಳ್ಳುತ್ತಿವೆ. ಆದರೆ ಸದ್ಯಕ್ಕೆ ಭಕ್ತರಿಗೆ ಸಿಗಂಧೂರು ಚೌಡೇಶ್ವರಿ ತಾಯಿ ದರ್ಶನ ಸೋಮವಾರದಿಂದ ಇರುವುದಿಲ್ಲ.

ಜಿಲ್ಲೆಯ ಸಾಗರ ತಾಲೂಕಿನ ಸಿಗಂಧೂರು ಚೌಡೇಶ್ವರಿ ದೇವಾಲಯವನ್ನು ಜೂನ್ 15 ನಂತರ ತೆರೆಯಲು ದೇವಸ್ಥಾನದ ಟ್ರಸ್ಟ್ ನಿರ್ಧಾರ ಮಾಡಿದೆ. ಚೌಡೇಶ್ವರಿ ತಾಯಿ ದೇವಾಲಯಕ್ಕೆ ಹೆಚ್ಚಾಗಿ ಕರಾವಳಿ ಹಾಗೂ ಬೆಂಗಳೂರು ಭಾಗದ ಜನರು ಬರುತ್ತಾರೆ. ಆದರೆ ಈಗ ಕರಾವಳಿ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಿರುವ ಕಾರಣ ದೇವಸ್ಥಾನ ತೆರೆಯಲು ಆಡಳಿತ ಮಂಡಳಿ ಹಿಂದೇಟು ಹಾಕಿದೆ ಎಂದು ತಿಳಿದು ಬಂದಿದೆ.

ಮುಜರಾಯಿ ದೇವಾಲಯಗಳ ರೂಪುರೇಷೆ ನೋಡಿಕೊಂಡು ದೇವಾಲಯ ತೆರೆಯಲು ದೇವಸ್ಥಾನದ ಟ್ರಸ್ಟ್ ನಿರ್ಧಾರ ಮಾಡಿದೆ. ಸದ್ಯಕ್ಕೆ ಪ್ರತಿದಿನ ಚೌಡೇಶ್ವರಿ ತಾಯಿಗೆ ಅರ್ಚಕರಿಂದ ಪೂಜೆ, ಪ್ರಸಾದ ನಡೆಯುತ್ತಿದೆ. ಕೇಂದ್ರ ಸರ್ಕಾರ ಕೊರೊನಾ ಲಾಕ್‍ಡೌನ್ 5.0ನಲ್ಲಿ ಹೇರಿದೆ. ರಾಜ್ಯ ಸರ್ಕಾರ ಜೂನ್ 8ರಿಂದ ದೇವಾಲಯ ತೆರೆಯಲು ಅವಕಾಶ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಮಾರ್ಗ ಸೂಚಿ ಅನುಸರಿಸುವಂತೆ ಆದೇಶಿಸಿದೆ.
ಸರ್ಕಾರದ ಮಾರ್ಗ ಸೂಚಿಗಳೇನು..?
- ದೇವಸ್ಥಾನ ನಿತ್ಯ ಸ್ವಚ್ಛತೆ, ಒಳಗೆ-ಹೊರಗೆ ಡಿಸ್ ಇನ್ಫೆಕ್ಟರ್ ಸಿಂಪಡಣೆ ಕಡ್ಡಾಯ
- ಭದ್ರತಾ ಸಿಬ್ಬಂದಿಯನ್ನು ಎರಡು ಪಾಳಿಯಲ್ಲಿ ದೇವಾಲಯದ ಖರ್ಚಿನಲ್ಲಿ ನೇಮಿಸುವುದು
- ದೇವಾಲಯದ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ಕಡ್ಡಾಯ
- ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ, ಸ್ಯಾನಿಟೈಸರ್ ಕಡ್ಡಾಯ
- ಸ್ಕ್ರೀನಿಂಗ್‍ನಲ್ಲಿ ಜ್ವರ ಪತ್ತೆಯಾದರೆ ದೇವಸ್ಥಾನಕ್ಕೆ ಪ್ರವೇಶವಿಲ್ಲ
- ಮಾಸ್ಕ್ ಧರಿಸದ ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶವಿಲ್ಲ
- ಸಾಮಾಜಿಕ ಅಂತರ ಕಾಪಾಡಲು ಬಾಕ್ಸ್, ಲೈನ್ ರೂಪಿಸುವುದು ಕಡ್ಡಾಯ.
- ದೇವಸ್ಥಾನದ ಶೌಚಾಲಯ ಸ್ವಚ್ಛವಾಗಿಡುವುದು



