ಡಿವಿಜಿ ಸುದ್ದಿ, ಬೆಂಗಳೂರು: ಏಪ್ರಿಲ್ 14ರ ಬಳಿಕ ಲಾಕ್ ಡೌನ್ ಮುಂದುವರಿದರೆ ಜನ ವಿರೋಧಿಸದೇ ಸಹಕಾರ ನೀಡಬೇಕು. ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಸಹಕಾರ ನೀಡುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಂಕಷ್ಟದ ಸಮಯದಲ್ಲಿ ಸರ್ಕಾರ ಕೈಗೊಳ್ಳುವ ಎಲ್ಲಾ ಕ್ರಮಕ್ಕೆ ಸಾಥ್ ಕೊಡಬೇಕು ಎಂದು ಕರೆ ನೀಡಿದ್ದಾರೆ.
ಸಿಎಂ ಯಡಿಯೂರಪ್ಪ ಅವರು ಕರೆ ಮಾಡಿದ್ದರು. ಕೊರೊನಾ ವಿರುದ್ಧದ ಹೋರಾಟಕ್ಕೆ ಸಹಕಾರ ನೀಡುವಂತೆ ಕೋರಿದರು. ಶಾಸಕರ ಸಂಬಳದಲ್ಲಿ ಶೇ.30ರಷ್ಟು ಕಡಿತ ಮಾಡಿ ಕೊರೊನಾ ಸಂಕಷ್ಟಕ್ಕೆ ಅದನ್ನು ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಸರ್ಕಾರಿ ಉದ್ಯೋಗಿಗಳ ಸಂಬಳ ಕಡಿತ ಮಾಡುವುದು ಬೇಡ ಎಂದರು.
ರಾಜ್ಯದ ಅರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದು, ಬಜೆಟ್ ಅನುಷ್ಠಾನಕ್ಕೆ ಸರ್ಕಾರದ ಬಳಿ ಹಣ ಇಲ್ಲ. ದಾರಿದ್ರ್ಯ ಸರ್ಕಾರ ಅಂತ ಬಜೆಟ್ ಭಾಷಣದಲ್ಲಿ ಟೀಕೆ ಮಾಡಿದ್ದೆ. ಅಂದೇ ಸರ್ಕಾರ ಸಂಕಷ್ಟದಲ್ಲಿ ಇತ್ತು. ಕೇಂದ್ರದಿಂದ ಈ ಹಿಂದೆ ನಮ್ಮ ಪಾಲು ಬಂದಿಲ್ಲ. ಈ ಬಾರಿಯೂ ರಾಜ್ಯ ಸಂಕಷ್ಟಕ್ಕೆ ಸಿಲುಕಲಿದೆ. ಅಬಕಾರಿ, ನೊಂದಣಿ ನಿಂತಿದೆ. ಹೀಗಾಗಿ ಸರ್ಕಾರ ಲಾಕ್‍ಡೌನ್ ಮುಗಿದ ಬಳಿಕ ತೆರಿಗೆಯಲ್ಲಿ ಸೋರಿಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದೇನೆ ಎಂದರು.
ರಾಜ್ಯದ ವಿವಿಧ ಜಿಲ್ಲೆಯಲ್ಲಕ ಮುಂಗಾರು ಪೂರ್ವದ ಮಳೆಯಿಂದ ಭತ್ತ, ಕಬ್ಬು, ಬಾಳೆ, ಎಲ್ಲ ನೆಲ ಕಚ್ಚಿ ರೈತರಿಗೆ ಸಮಸ್ಯೆಯಾಗಿದೆ. ಅಧಿಕಾರಿಗಳಿಂದ ಸರ್ವೇ ಮಾಡಿ, ಪರಿಹಾರ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ದೆಹಲಿಯ ಜಮಾತ್‍ಗೆ ತೆರಳಿದವರು ಚೆಕ್ ಮಾಡಿಸಿಕೊಳ್ಳಬೇಕು. ಮಾಹಿತಿಗೆ ಬಂದ ಆಶಾ ಕಾರ್ಯಕರ್ತೆ ಯರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದನ್ನ ನೆಪ ಮಾಡಿಕೊಂಡು ಅಲ್ಪಸಂಖ್ಯಾತರ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದರು.



