ಡಿವಿಜಿ ಸುದ್ದಿ, ಮೈಸೂರು: ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಮಹಾರಾಷ್ಟ್ರ ಬಿಜೆಪಿ ಘಟಕ ಚುನಾವಣೆ ಘೋಷಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮೊದಲು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಸಸ್ತಿ ನೀಡಿ ಎಂದಿದ್ದಾರೆ.
ಚುನಾವಣೆ ಬಂದಾಗಲೆಲ್ಲ ಬಿಜೆಪಿ ಅಭಿವೃದ್ಧಿ ವಿಷಯಕ್ಕಿಂತ ಜನರ ಭಾವನೆಗಳನ್ನು ಪ್ರಚೋದಿಸುವ ಹಾಗೂ ಹಿಂದುತ್ವದ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ ಎಂದು ಮೈಸೂರಿನಲ್ಲಿ ವಾಗ್ದಾಳಿ ನಡೆಸಿದರು.
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಕೊಡಿ ಎಂದು ಬೇಡಿಕೊಂಡರೂ ಕೊಡಲಿಲ್ಲ. ಆದರೆ, ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸಾವರ್ಕರ್‌ಗೆ ಈ ಗೌರವ ನೀಡಲು ಮುಂದಾಗಿದೆ’ ಎಂದು ಕಿಡಿಕಾರಿದರು.
‘ಹಿಂದುತ್ವ ಪದವನ್ನು ಮೊದಲು ಬಳಸಿದ್ದೇ ಸಾವರ್ಕರ್. ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದರು. ಅವರು ಜೈಲಿಗೆ ಹೋಗಿದ್ದೂ ನಿಜ’. ‘ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯವಿಲ್ಲವೆಂದು ಅವರು ಖುಲಾಸೆ ಗೊಂಡಿರಬಹುದು. ಅಂಥವರಿಗೆ ಭಾರತ ರತ್ನ ಕೊಡಬಾರದು ಎಂದಷ್ಟೇ ಹೇಳಿದ್ದೆ. ಅದಕ್ಕಾಗಿ, ನನಗೆ ಇತಿಹಾಸವೇ ಗೊತ್ತಿಲ್ಲ ಎಂದು ಬಿಜೆಪಿಯವರು ಮಾತನಾಡುತ್ತಾರೆ. ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕಟೀಲ್‌ಗೆ ಕರ್ನಾಟಕವೇ ಗೊತ್ತಿಲ್ಲ. ರಾಜ್ಯದಲ್ಲಿ 32 ಜಿಲ್ಲೆಗಳಿವೆ ಎಂದು ಹೇಳಿಕೆ ಕೊಡುತ್ತಾರೆ. ಇಂಥವರು ಇತಿಹಾಸದ ಪಾಠ ಕಲಿಯಬೇಕಾ ಎಂದರು .