ಡಿವಿಜಿ ಸುದ್ದಿ, ಬೆಂಗಳೂರು: ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣಾ ಕಣ ರಂಗೇರಿದ್ದು, ಬಿಜೆಪಿ ಮೂರು ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ.
ಬೆಂಗಳೂರಿನಲ್ಲಿ ಇಂದು ಸಂಜೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮೂವರ ಹೆಸರುಗಳನ್ನು ಬಿಜೆಪಿ ಹೈಕಮಾಂಡ್ ಶಿಫಾರಸು ಮಾಡಲಾಗಿದೆ. ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಅಥವಾ ರಮೇಶ್ ಕತ್ತಿ, ಮತ್ತೊಂದು ಸ್ಥಾನಕ್ಕೆ ಉದ್ಯಮಿ ಪ್ರಕಾಶ್ ಶೆಟ್ಟಿ ಹೆಸರನ್ನು ರಾಜ್ಯ ಬಿಜೆಪಿ ಫೈನಲ್ ಮಾಡಿದೆ.
ರಾಜ್ಯದ ಶಿಫಾರಸ್ಸು ಆಧರಿಸಿ ಬಿಜೆಪಿ ಹೈಕಮಾಂಡ್ ಸೋಮವಾರ ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ಕೋರ್ ಕಮಿಟಿ ಸಭೆಗೂ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಸಭೆಗಳ ಮೇಲೆ ಸಭೆ ನಡೆಯಿತು.

ಕಾಂಗ್ರೆಸ್ ಪಕ್ಷವೂ ಕೂಡ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಇನ್ನು ಜೆಡಿಎಸ್ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.
ರಾಜ್ಯಸಭೆ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದಾರೆ. ಸೋಮವಾರ ಬೆಳಗ್ಗೆ 9 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಸಿಎಲ್‍ಪಿ ಮೀಟಿಂಗ್ ನಡೆಯಲಿದೆ.



