ಡಿವಿಜಿಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ದಕ್ಷಿಣ, ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಇಂದು, ನಾಳೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇಂದು ಅತಿ ಹೆಚ್ಚುನ ಮಳೆಯಾಗಲಿದೆ. ಈ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆಯಾಗಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಇನ್ನು ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಇಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಕಾರವಾರ ಹಾಗೂ ಕುಂದಾಪುರದಲ್ಲಿ ಗರಿಷ್ಠ 13 ಸೆಂ.ಮೀ ಮಳೆಯಾಗಿದೆ. ಕಾರ್ಕಳ, ಗೋಕರ್ಣ, ಆಗುಂಬೆ 7, ದೊಡ್ಡಬಳ್ಳಾಪುರ 6, ಭಟ್ಕಳ, ಭಾಗಮಂಡಲ 5, ಉಪ್ಪಿನಂಗಡಿ, ಮೂಡುಬಿದರೆ, ಕಲಬುರ್ಗಿ, ಜಮಖಂಡಿ 3, ಮಂಗಳೂರು, ಹೊಸನಗರ, ಚಿಕ್ಕಬಳ್ಳಾಪುರ 2, ಪುತ್ತೂರು, ಮಡಿಕೇರಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ನಿನ್ನೆ ರಾತ್ರಿ ಭಾನುವಾರ ದಾವಣಗೆರೆ, ಹರಪನಹಳ್ಳಿಯಲ್ಲಿ ಉತ್ತಮ ಮಳೆಯಾಗಿದೆ.