ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಇಂದಿನಿಂದ ರಿಂದ 10ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸೋಮವಾರದಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.
ಅರಬ್ಬಿ ಸಮುದ್ರದಿಂದ ರಾಜ್ಯದ ಕರಾವಳಿಯೆಡೆಗೆ ಗಂಟೆಗೆ 45ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರರು ಕಡಲಿಗೆ ಇಳಿಯದಂತ ಎಚ್ಚರಿಕೆ ನೀಡಲಾಗಿದೆ.
ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಜು.7ರಿಂದ 9 ರವರೆಗೆ ಮಳೆ ಪ್ರಮಾಣ ಕಡಿಮೆ ಇರಲಿದೆ. ಈ ಭಾಗದ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಕದ್ರಾದಲ್ಲಿ 9 ಸೆಂ.ಮೀ ಮಳೆಯಾಗಿದೆ. ಮಂಗಳೂರು, ಕೊಲ್ಲೂರು 8, ಪಣಂಬೂರು, ಮೂಡುಬಿದ್ರೆ, ಉಡುಪಿ 7, ಕೋಟ, ಕುಂದಾಪುರ, ಕಳಸ 6, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಭಾಗಮಂಡಲ 5, ಪುತ್ತೂರು, ಧರ್ಮಸ್ಥಳ, ಸುಳ್ಯ, ಭಟ್ಕಳ, ಹೊಸನಗರ 3, ಕಾರವಾರ, ಶೃಂಗೇರಿ, ತೀರ್ಥಹಳ್ಳಿ 2, ಗದಗ, ನಿಪ್ಪಾಣಿ, ಬೆಳಗಾವಿ, ಸೋಮವಾರಪೇಟೆ, ಹಾಸನ, ಗೌರಿಬಿದನೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.



