ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ತೀವ್ರಗೊಂಡಿದ್ದು, ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಇಂದು, ನಾಳೆ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆದೆ. ಹೀಗಾಗಿ ಅಲ್ಲಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯಲ್ಲಿ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಜು.21ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗಬಹುದು.
ದಕ್ಷಿಣ ಕನ್ನಡ ಜಿಲ್ಲೆಯ ಮಾಣಿಯಲ್ಲಿ ಗರಿಷ್ಠ 15 ಸೆಂ.ಮೀ ಮಳೆಯಾಗಿದೆ. ಕೊಲ್ಲೂರು 14, ಆಗುಂಬೆ 13, ಉಡುಪಿ 11, ಕದ್ರಾ 10, ಕಾರವಾರ, ಅಂಕೋಲಾ, ಕುಂದಾಪುರ, ಮೂಡುಬಿದರೆ, ಬೆಳ್ತಂಗಡಿ 9, ಮಂಗಳೂರು, ಹೊಸನಗರ, ಭಾಗಮಂಡಲ 8, ಉಪ್ಪಿನಂಗಡಿ, ಭಟ್ಕಳ 7, ಸಾಗರ, ತೀರ್ಥಹಳ್ಳಿ, ಮಡಿಕೇರಿ 3, ಬೆಳಗಾವಿ, ಸಕಲೇಶಪುರ, ಹಾಸನ, ಸೊರಬ 2, ನಿಪ್ಪಾಣಿ, ಬೈಲಹೊಂಗಲ, ಚಿಕ್ಕಮಗಳೂರು, ಎಚ್.ಡಿ.ಕೋಟೆ ಹಾಗೂ ಮಾಗಡಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.



