ಡಿವಿಜಿ ಸುದ್ದಿ, ಮೈಸೂರು: ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡುವ ಭರವಸೆ ನೀಡಿರಲಿಲ್ಲ ಎಂಬ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಅವರ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ಮುಖಂಡ ಎಚ್. ವಿಶ್ವನಾಥ್, ಡಾ.ಅಶ್ವತ್ಥ ನಾರಾಯಣ ಅವರು ಉಪಮುಖ್ಯಮಂತ್ರಿ ಆಗಿದ್ದು ಯಾರಿಂದ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಹಾಗೂ ಮುಖ್ಯಮಂತ್ರಿ ನಡುವೆ ಏನು ಮಾತುಕತೆ, ಒಪ್ಪಂದ ನಡೆದಿದೆ ಎಂಬುದು ಅವರಿಗೇನು ಗೊತ್ತು? ಅವರು ಏನೂ ಮಾತನಾಡದೆ ಸುಮ್ಮನಿದ್ದರೇ ಒಳ್ಳೆಯದು ತಿರುಗೇಟು ನೀಡಿದ್ದಾರೆ.
ಹುಣಸೂರು ಕ್ಷೇತ್ರದಲ್ಲಿ ನಾನು ಗೆದ್ದಿದ್ದೆ. ಉಪಚುನಾವಣೆಯಲ್ಲಿ ಪುನಃ ಸ್ಪರ್ಧಿಸಿದೆ. ಆದರೆ, ಸೋಲು ಎದುರಾಯಿತು. ನಾಯಕರಾದವರು ಯಾರು ಕೂಡ ಸೋತಿಲ್ಲವೇ? ಅಷ್ಟಕ್ಕೂ ಬಿಜೆಪಿಯಲ್ಲಿ ಸೋತವರನ್ನೇ ಉಪಮುಖ್ಯಮಂತ್ರಿಯನ್ನಾಗಿ ಮಾಡಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅಷ್ಟಕ್ಕೂ ನಾವು ಅಶ್ವತ್ಥ ನಾರಾಯಣ ಜೊತೆ ಯಾವುದೇ ರೀತಿಯ ಚರ್ಚೆ ನಡೆಸಿಲ್ಲ. ಅವರಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊರತುಪಡಿಸಿ ಬೇರೆ ಯಾರು ಮಾತನಾಡಿದರೂ ಅದಕ್ಕೆ ಅರ್ಥವಿಲ್ಲ ಎಂದಿದ್ದಾರೆ.



