ಡಿವಿಜಿ ಸುದ್ದಿ, ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಸಕ್ರಿಯ ರಾಜಕಾರಣದಲ್ಲಿ ಇದ್ದಿದ್ದರೆ ಶ್ರೀರಾಮುಲು ಇನ್ನೂ ಬೇಗ ಡಿಸಿಎಂ ಆಗ್ತಿದ್ರು ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಡಿಸಿಎಂ ಸ್ಥಾನ ನೀಡಬೇಕು ಎನ್ನುವುದು ಈ ಭಾಗದ ಜನರ ಬೇಡಿಕೆ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಅವರು. ಉನ್ನತ ಮಟ್ಟದಲ್ಲಿ ಬೆಳೆದಿದ್ದು, ಈ ಬಗ್ಗೆ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿ ಎಂದರು.
ಕಾಲ ಚಕ್ರ ಹೀಗೆಯೇ ಇರುವುದಿಲ್ಲ. ಬದಲಾಗುತ್ತಿರುತ್ತದೆ. ಕೆಳಗಿದ್ದವರು ಮೇಲೆ ಬರಲೇಬೇಕು. ಅಭಿವೃದ್ಧಿ ವಿಚಾರದಲ್ಲಿ ಬಳ್ಳಾರಿ ಹಿಂದೆ ಉಳಿದಿಲ್ಲ. 2008 ರಲ್ಲಿ ಭಾರಿ ಪ್ರಬಲರಾಗಿದ್ದೆವು. ಈಗಲೂ ಪ್ರಬಲರಾಗಿಯೇ ಇದ್ದೇವೆ. ಆ ಭಗವಂತ ನಮ್ಮನ್ನು ದುಬರ್ಲರನ್ನಾಗಿ ಮಾಡಬೇಕೇ ಹೊರತು ಬೇರೆ ಯಾರಿಂದಲೂ ಸಾಧ್ಯಲ್ಲ ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆ ಅಖಂಡವಾಗಿರಬೇಕು ಎನ್ನುವುದೇ ನನ್ನ ನಿಲುವು. ಜಿಲ್ಲೆಯನ್ನು ಒಡೆಯುವುದು ಬೇಡ ಎಂದು ನಾನು ಆನಂದ್ ಸಿಂಗ್ ಬಳಿ ಮನವಿ ಮಾಡುತ್ತೇನೆ. ಶಾಸಕರಾದ ಕರುಣಾಕರ ರೆಡ್ಡಿ, ಗೋಪಾಲಕೃಷ್ಣ, ಸೋಮಲಿಂಗಪ್ಪ ಅವರೂ ಜಿಲ್ಲೆ ಅಖಂಡವಾಗಿರಲಿ ಎಂದು ಹೇಳಿದ್ದಾರೆ. ಶೇ. 90% ರಷ್ಟು ನಾಯಕರು ಜಿಲ್ಲಾ ವಿಭಜನೆ ಬೇಡ ಎಂದಿದ್ದಾರೆ ಎಂದರು.